ಜಿಲ್ಲೆ

ರೇಷನ್ ಕಾರ್ಡ್ ತಿದ್ದುಪಡಿಗೆ ತಪ್ಪದ ಅಲೆದಾಟ

ರವಿ ಎಸ್. ಬಳೂಟಗಿ

ಲಕ್ಷ್ಮೇಶ್ವರ: ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಪಡಿತರ ಚೀಟಿ ತಿದ್ದುಪಡಿಗೆ ಸರ್ಕಾರ ಅವಕಾಶ ಕಲ್ಪಿಸಿದ್ದರೂ ಸರ್ವರ್ ಸಮಸ್ಯೆ ದೊಡ್ಡ ತಲೆನೋವಾಗಿದೆ.

ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆಗೆ ಪಡಿತರ ಕಾರ್ಡ್ ಅವಶ್ಯವಾಗಿದ್ದು, ಈಗ ಪಡಿತರ ಚೀಟಿ ತಿದ್ದುಪಡಿ ಶುರುವಾಗಿದೆ. ಆದರೆ, ಸರ್ವರ್ ಸಮಸ್ಯೆಯಿಂದ ಜನರು ತಿದ್ದುಪಡಿ ಕೇಂದ್ರಗಳಲ್ಲಿ ಕಾಯುವಂತಾಗಿದೆ.

ಆ. 18ರಿಂದ ಪ್ರಾರಂಭವಾದ ಪಡಿತರ ಕಾರ್ಡ್ ತಿದ್ದುಪಡಿ ಪ್ರಕ್ರಿಯೆಗೆ ಆ.21ವರೆಗೆ ಅಂದರೆ 4 ದಿನ ಕಾಲಾವಕಾಶ ನೀಡಿತ್ತು. ಆದರೆ, ಸರ್ವರ್ ಸಮಸ್ಯೆಯಲ್ಲಿಯೇ 4 ದಿನ ಕಳೆದು ಹೋಗಿದೆ. ಲಕ್ಷ್ಮೇಶ್ವರ- ಶಿರಹಟ್ಟಿ ತಾಲೂಕಿನಲ್ಲಿ ಕೇಲವೇ ಕಾರ್ಡ್‌ಗಳ ತಿದ್ದುಪಡಿ ಮಾಡಲಾಗಿದೆ.

ಬೆಳಗ್ಗೆಯಿಂದಲೇ ಸರ್ವರ್ ಮತ್ತಿತರೆ ತಾಂತ್ರಿಕ ಸಮಸ್ಯೆ ಕಾಡುತ್ತಿದೆ. ಸರ್ವರ್ ಕಾಟದಿಂದ ತಿದ್ದುಪಡಿ ಕೇಂದ್ರದವರು ಇಡೀ ದಿನ ಕಂಪ್ಯೂಟರ್ ಮುಂದೆ ಕುಳಿತಿದ್ದರೂ ಒಂದೂ ಕಾರ್ಡ್ ತಿದ್ದುಪಡಿ ಆಗದೆ ಬೇಸತ್ತಿದ್ದಾರೆ. ಅವರು ಜನರ ಬೈಗುಳ ಸಹಿಸಿಕೊಳ್ಳಬೇಕಿದೆ. ಅರ್ಜಿ ಹಾಕಲು ಬೆಳಗ್ಗೆ 12ರಿಂದ ಸಂಜೆ 4ಗಂಟೆ ವರೆಗೆ ಸಮಯ ನಿಗದುಪಡಿಸಿದ್ದು. ಕಾರ್ಡ್‌ಗಳಲ್ಲಿನ ಹೆಸರು ತಿದ್ದುಪಡಿ, ಹೆಸರು ಸೇರ್ಪಡೆ, ವಿಳಾಸ ಬದಲಾವಣೆ ಇತ್ಯಾದಿಗಳಿಗೆ ಅವಕಾಶ ನೀಡಲಾಗಿದೆ. ಮೂರು ದಿನಗಳಲ್ಲಿ 8ರಿಂದ 10 ಕಾರ್ಡ್‌ಗಳ ತಿದ್ದುಪಡಿ ಮಾತ್ರ ಸಾಧ್ಯವಾಗಿದೆ.