ಗಜೇಂದ್ರಗಡ: ಸರ್ಕಾರ ವಕ್ಪ್ ಬೋರ್ಡ್ ಕಾಯ್ದೆ ರದ್ದುಪಡಿಸಬೇಕು ಅಥವಾ ಸಂವಿಧಾನಕ್ಕೆ ಅನುಗುಣವಾಗಿ ಸೂಕ್ತ ತಿದ್ದುಪಡಿ ತರಬೇಕು ಎಂದು ಭಾರತೀಯ ಕಿಸಾನ್ ಸಂಘ ತಾಲೂಕು ಘಟಕದಿಂದ ಗುರುವಾರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಭಾರತೀಯ ಕಿಸಾನ್ ಸಂಘದ ತಾಲೂಕಾಧ್ಯಕ್ಷ ಮಲ್ಲನಗೌಡ ಪಾಟೀಲ ಮಾತನಾಡಿ, ರಾಜ್ಯದಲ್ಲಿ ವಕ್ಪ್ ಬೋರ್ಡ್ನವರು ಮನಸೋ ಇಚ್ಚೆ ರೈತರ ಜಮೀನುಗಳ ಪಹಣಿಯಲ್ಲಿ ವಕ್ಪ್ ಆಸ್ತಿಯೆಂದು ದಾಖಲಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕ ಆಸ್ತಿ, ದೇವಸ್ಥಾನದ ಆಸ್ತಿಗಳು, ಸಂಘ -ಸಂಸ್ಥೆಗಳ ಜಾಗಗಳು, ಸರ್ಕಾರಿ ಶಾಲಾ ಆಸ್ತಿಗಳಲ್ಲಿ ವಕ್ಪ್ ಆಸ್ತಿಗಳೆಂದು ನಮೂದಿಸಲಾಗುತ್ತಿದೆ. ಕೂಡಲೇ ರಾಜ್ಯ ಸರ್ಕಾರ ವಕ್ಪ್ ಕಾಯ್ದೆ ರದ್ದುಗೊಳಿಸಬೇಕು ಇಲ್ಲವೇ ಸಂವಿಧಾನಕ್ಕೆ ಅನುಗುಣವಾಗಿ ಸೂಕ್ತ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದರು.
ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಎಸ್.ಎಸ್ ಪಾಟೀಲ, ಕಾರ್ಯದರ್ಶಿ ರವಿ ಮ್ಯಾಗೇರಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಮಲ್ಲಸರ್ಜ ದೇಸಾಯಿ (ಇಟಗಿ), ಜಗದೀಶ ಸಂಕನಗೌಡರ, ಉಮೇಶ ಪಾಟೀಲ, ಶಿವರಾಮಸರ್ಜಾ ದೇಸಾಯಿ, ಸಂಜೀವ ಜೋಶಿ, ರಘುನಾಥ್ ಕೊಂಡಿ, ಶಿವಾನಂದ ಇಟಗಿ, ಇತರರು ಉಪಸ್ಥಿತರಿದ್ದರು.