ಬಳ್ಳಾರಿ ಡಿಸಿ ಕಚೇರಿ ಮುಂದೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ವಿವಿಧ ಸಂಘಟನೆಗಳ ಪ್ರಮುಖರಾದ ಸತ್ಯಬಾಬು, ಟಿ.ಜಿ.ವಿಠ್ಠಲ್, ಸೂರ್ಯನಾರಾಯಣ, ಶಾಂತಾ, ಚೇತನ್, ಪಾರ್ವತಮ್ಮ, ಜಯಮ್ಮ, ನಾಗಮ್ಮ, ಲಕ್ಷ್ಮೀದೇವಿ, ರಮಾದೇವಿ ಇತರರಿದ್ದರು. 
ಜಿಲ್ಲೆ

ಕಾರ್ಮಿಕ ಸಂಹಿತೆ ರದ್ದುಗೊಳಿಸಿ

ಬಳ್ಳಾರಿ: ಕಾರ್ಮಿಕ ವಿರೋಧಿ ಹಾಗೂ ಬಂಡವಾಳಶಾಹಿ ಪರವಾದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ನಗರದ ಡಿಸಿ ಕಚೇರಿ ಎದುರು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಎಐಯುಟಿಯುಸಿ ಪ್ರಮುಖ ಎ.ದೇವದಾಸ್ ಮಾತನಾಡಿ, ಕೇಂದ್ರ ಸರ್ಕಾರ ವ್ಯಾಪಾರ ಸುಲಭ ಮಾಡುವ ಹೆಸರಿನಲ್ಲಿ ಕಾರ್ಮಿಕರ ಮೇಲೆ ಗುಲಾಮಗಿರಿಯ ಷರತ್ತುಗಳನ್ನು ಹೇರುತ್ತಿದೆ. ಅವಿರತ ತ್ಯಾಗ, ಬಲಿದಾನದಿಂದ ಗಳಿಸಿದ 29 ಕಾರ್ಮಿಕ ಕಾನೂನುಗಳನ್ನು ಕಿತ್ತು ಹಾಕಿ ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆಗಳನ್ನು ಜಾರಿಗೊಳಿಸಲು ಮುಂದಾಗಿದೆ ಎಂದು ದೂರಿದರು.

ಕಾರ್ಮಿಕ ಸಂಹಿತೆಗಳು ಕನಿಷ್ಠ ವೇತನ, ಸಾಮಾಜಿಕ ಭದ್ರತೆ, ಮೂಲಭೂತ ಹಕ್ಕುಗಳು, ಆಂದೋಲನಗಳು ಮತ್ತು ಮುಷ್ಕರದ ಹಕ್ಕು ಸೇರಿದಂತೆ ಸಾಮೂಹಿಕ ಪ್ರತಿಭಟನೆಯ ಹಕ್ಕುಗಳನ್ನು ಕಸಿದುಕೊಳ್ಳುತ್ತವೆ. ಕೇಂದ್ರ ಸರ್ಕಾರ ಈ ನೀತಿಗಳನ್ನು ಅನುಷ್ಠಾನ ಮಾಡುತ್ತಿರುವುದು ಕಾರ್ಮಿಕರು ಹಾಗೂ ಸಾರ್ವಜನಿಕರ ವಿರೋಧಿ ಕ್ರಮವಾಗಿದೆ ಎಂದು ದೇವದಾಸ್ ಅಕ್ರೋಶ ವ್ಯಕ್ತಪಡಿಸಿದರು.