Repay the loan on time. 
ಜಿಲ್ಲೆ

ಸಕಾಲದಲ್ಲಿ ಸಾಲ ಮರುಪಾವತಿಸಿ

Vijayapura - Desk - Doddanagouda Gudihindin

 ಬೀಳಗಿ ಬಾಗಲಕೋಟೆ ಜಿಲ್ಲಾ ಕೇಂದ್ರದಲ್ಲಿ 2008ರಲ್ಲಿ ಪ್ರಾರಂಭವಾದ ಬಾಪೂಜಿ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕ್ 75 ಸಾವಿರ ಸದಸ್ಯರನ್ನು ಹೊಂದಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದರು.

ತಾಲೂಕಿನ ಬಾಡಗಿ ಗ್ರಾಮದ ಪುನರ್ವಸತಿ ಕೇಂದ್ರದಲ್ಲಿ ಗುರುವಾರ ಬಾಪೂಜಿ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕಿನ 125ನೇ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.

ಬಾಡಗಿ ಗ್ರಾಮದಲ್ಲಿನ ಬಾಪೂಜಿ ಬ್ಯಾಂಕ್ ಪ್ರಾರಂಭಿಕ ಹಂತದಲ್ಲಿಯೇ 2 ಕೋಟಿ ರೂ. ಠೇವಣಿ ಹೊಂದಿರುವುದು ಇಲ್ಲಿಯ ಜನರ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಗೆ ಸಾಕ್ಷಿ. ನಿಗದಿತ ಅವಧಿಯಲ್ಲಿಯೇ ಸಾಲ ಮರುಪಾವತಿ ಮಾಡಿದರೆ ಹೆಚ್ಚು ಅನುಕೂಲವಾಗಲಿದೆ ಎಂದರು.

ಬೂದಿಹಾಳ ಕಿರೇಶ್ವರ ಶ್ರೀಮಠದ ಪ್ರಭು ಮಹಾಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಎಸ್.ಆರ್. ಪಾಟೀಲರು ತಮ್ಮ ರಾಜಕೀಯ ರಂಗದಲ್ಲಿ ಸಾಕಷ್ಟು ಜನಾನುರಾಗಿಯಾಗಿ ಕೆಲಸ ಮಾಡಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಜಲಾಶಯ ಹಿನ್ನೀರಿನ ಬಾಧಿತ ಮುಳುಗಡೆ ಸಂತ್ರಸ್ತರ ಬದುಕು ದುಸ್ತರಗೊಂಡಾಗ ಅವರಿಗೆ ಆರ್ಥಿಕವಾಗಿ ಚೈತನ್ಯ ನೀಡಲು ಸಹಕಾರಿ ರಂಗ ಪ್ರವೇಶಿಸಿದರು ಎಂದು ಬಣ್ಣಿಸಿದರು.

ಬಾಡಗಿಯ ಬಕ್ಕೇಶ್ವರ ಮಠದ ಬಕ್ಕಯ್ಯ ಮಹಾಸ್ವಾಮಿಗಳು, ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ಸತ್ಯಪ್ಪ ಮೇಲ್ನಾಡ, ಮುಖ್ಯ ಕಾರ್ಯನಿರ್ವಾಹಕ ಎಸ್.ಸಿ. ಮೋಟಗಿ, ಪ್ರಧಾನ ವ್ಯವಸ್ಥಾಪಕ ವಿಜಯಾನಂದ ಭಟ್, ಬಾಡಗಿ ಶಾಖೆ ಸಲಹಾ ಸಮಿತಿ ಅಧ್ಯಕ್ಷ ಅಪ್ಪಾಸಾಬ ಸಿ. ದೇಸಾಯಿ, ಉಪಾಧ್ಯಕ್ಷೆ ದ್ರಾಕ್ಷಾಯಣಿ ಎಸ್. ಕೂಡ್ಲಿ, ಕೆ.ಜಿ. ಪಾಟೀಲ, ಬಿ.ಎಸ್. ಮುಕಾಶಿ, ಬಾಬುಗೌಡ ಪಾಟೀಲ, ಎಚ್.ಎಸ್. ಶಿಂಗರಡ್ಡಿ, ಶೇಖಪ್ಪ ಕೋಟಿ ಇದ್ದರು.