ಆಲೂರು: ಪಿಎಲ್‌ಡಿ ಬ್ಯಾಂಕ್‌ನಿಂದ ರೈತರು ಪಡೆದಿರುವ ದೀರ್ಘ ಹಾಗೂ ಅಲ್ಪಾವಧಿ ಸಾಲಗಳನ್ನು ಸಕಾಲದಲ್ಲಿ ಮರು ಪಾವತಿಸಿ ರಿಯಾಯಿತಿ ಬಡ್ಡಿ ದರದ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಬ್ಯಾಂಕ್ ಅಧ್ಯಕ್ಷ ಬಿ.ಕೆ.ಲಿಂಗರಾಜು ಸಲಹೆ ನೀಡಿದರು.
ಪಟ್ಟಣದ ಬಿ.ಎಂ.ರಸ್ತೆಯಲ್ಲಿರುವ ಪಿಎಲ್‌ಡಿ ಬ್ಯಾಂಕ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಕಳೆದ ವರ್ಷ 50 ಲಕ್ಷ ರೂ. ನಿವ್ವಳ ಲಾಭದಲ್ಲಿದ್ದ ಬ್ಯಾಂಕ್ ಪ್ರಸ್ತುತ ವರ್ಷದಲ್ಲಿ 70 ಲಕ್ಷ ರೂ.ನಷ್ಟದಲ್ಲಿದೆ. ಇದಕ್ಕೆ ಪ್ರಮುಖ ಕಾರಣ ಸಾಲ ತೆಗೆದುಕೊಂಡ ರೈತರು ಸರಿಯಾದ ಸಮಯಕ್ಕೆ ಮರುಪಾವತಿ ಮಾಡದೆ ಇರುವುದು ಹಾಗೂ ಸರ್ಕಾರಗಳು ಬದಲಾದಂತಹ ಸಂದರ್ಭದಲ್ಲಿ ಸಾಲ ಮನ್ನಾ ಮಾಡುತ್ತವೆ ಎಂಬ ಭಾವನೆಯಿಂದ ಹಲವು ರೈತರು ಸಾಲವನ್ನು ಮರುಪಾವತಿ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಾಲ ವಸೂಲಿಗೆ ಬ್ಯಾಂಕ್ ಸಿಬ್ಬಂದಿ ರೈತರ ಮನೆ ಹತ್ತಿರ ಹೋದಾಗ ಸರಿಯಾಗಿ ವರ್ತಿಸದೆ ಇರುವುದು ಬ್ಯಾಂಕ್‌ನ ನಷ್ಟಕ್ಕೆ ಪ್ರಮುಖ ಕಾರಣವಾಗಿದೆ. ಆದ್ದರಿಂದ ರೈತರು ಸಾಲಮನ್ನಾ ಆಗುತ್ತದೆ ಎಂಬ ಭಾವನೆಯನ್ನು ಬದಿಗೊತ್ತಿ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿದಾಗ ಬ್ಯಾಂಕ್‌ನ ಅಸ್ತಿತ್ವ ಉಳಿಯುತ್ತದೆ ಎಂದು ತಿಳಿಸಿದರು.
ಮಾಜಿ ಅಧ್ಯಕ್ಷ ಎಚ್.ಸಿ.ಶಾಂತಕೃಷ್ಣ ಮಾತನಾಡಿ, ರೈತರು ಸಕಾಲಕ್ಕೆ ಸರಿಯಾಗಿ ಸಾಲವನ್ನು ಮರುಪಾವತಿ ಮಾಡದಿದ್ದರೆ ಸಂಘದ ಬೆಳವಣಿಗೆ ಅಸಾಧ್ಯ. ಈಗಾಗಲೇ 3 ಕೋಟಿ ರೂ.ಸಾಲ ನೀಡಲಾಗಿದೆ. ಅದರೆ ಮರುಪಾವತಿಯಾಗುತ್ತಿಲ್ಲ. ಸಾಲ ತಗೆದುಕೊಂಡ ರೈತರು ಸಬೂಬು ಹೇಳದೆ ಮರುಪಾವತಿಸಿ ಸಂಘದ ಏಳಿಗೆಗೆ ಸಹಕರಿಯಾಗಬೇಕು ಎಂದರು.
ಬ್ಯಾಂಕ್ ಮಾಜಿ ನಿರ್ದೇಶಕ ಬಿ.ಸಿ.ಶಂಕರಾಚಾರ್ ಮಾತನಾಡಿ, ಸಹಕಾರಿ ಬ್ಯಾಂಕ್‌ಗಳು ರಾಷ್ಟ್ರೀಯ ಬ್ಯಾಂಕ್‌ಗಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿವೆ. ರೈತರು ಖಾಸಗಿ ಲೇವಾದೇವಿಗಾರರಿಂದ ಹೆಚ್ಚಿನ ಬಡ್ಡಿಗೆ ಸಾಲವನ್ನು ಪಡೆದು ಸಾಲದ ಸುಳಿಯಲ್ಲಿ ಸಿಲುಕುವುದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ಸಹಕಾರ ಬ್ಯಾಂಕ್‌ಗಳಲ್ಲಿ ಶೇ.3ರ ಬಡ್ಡಿ ದರದಲ್ಲಿ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸಾಲ ನೀಡುತ್ತ ಬರುತ್ತಿವೆ ಎಂದು ತಿಳಿಸಿದರು.
ಬ್ಯಾಂಕ್ ಉಪಾಧ್ಯಕ್ಷೆ ತುಳಸಮ್ಮ, ನಿರ್ದೇಶಕರಾದ ಎಚ್.ಸಿ.ಶಾಂತಕೃಷ್ಣ, ಎಂ.ಎಚ್.ರಂಗೇಗೌಡ, ಜಿ.ಆರ್.ರಾಮೇಗೌಡ, ರಂಗಯ್ಯ, ನಿಂಗಮ್ಮ, ರಾಧಮ್ಮ, ಎಂ.ಕೆ ಜಗದೀಶ್, ಜಾರ್ಜ್ ಡಿ. ಕಾಸ್ಟ, ಎಂ.ಎ.ನಿಂಗರಾಜು, ಬಿ.ಸಿ.ಸುನೀಲ್ ಕುಮಾರ್, ಸಿ.ಪಿ. ಧರಣೇಶ್, ಐ.ಎನ್.ನಿರಂಜನ್ ಮತ್ತು ವ್ಯವಸ್ಥಾಪಕ ಯಲ್ಲಪ್ಪ ಮಾದರ, ಜಿ.ಎಸ್.ಶಕುಂತಲಾ, ಮುಖಂಡರಾದ ಬಿ.ಸಿ.ಶಂಕರಾಚಾರ್, ರಾಜಪ್ಪ ಗೌಡ, ಮಂಜೇಗೌಡ, ನಿವೃತ್ತ ಶಿಕ್ಷಕ ರಾಮಚಂದ್ರ, ಯೋಗೇಶ್, ಕೆ.ವಿ.ಮಲ್ಲಿಕಾರ್ಜುನ್, ಸಿಬ್ಬಂದಿ ಎನ್.ಕುಮಾರ್, ರಾಜು, ತನುಜಾ, ಸೌಮ್ಯಾ ಇತರರು ಇದ್ದರು.