ಜಿಲ್ಲೆ

ಸಕಾಲದಲ್ಲಿ ಬ್ಯಾಂಕಿನ ಸಾಲ ಮರು ಪಾವತಿಗೊಳಿಸಿ: ಸಿ.ಎನ್.ದೇವರಾಜ್ ಸಲಹೆ

ಹರೀಶ್​​ ಕೆ.ಸಿ.

ಬೆಂಗಳೂರು: ಸಕಾಲದಲ್ಲಿ ಸಾಲ ಮರು ಪಾವತಿ ಮಾಡುತ್ತಾರೆ ಎನ್ನುವ ಕಾರಣಕ್ಕಾಗಿ ಬ್ಯಾಂಕ್, ಮಹಿಳೆಯರಿಗೆ ಭದ್ರತೆ ಇಲ್ಲದೆ ಸಾಲ ನೀಡುತ್ತದೆ. ಅದನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ಎಂದು ಅಪೆಕ್ಸ್ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಿ.ಎನ್.ದೇವರಾಜ್ ಹೇಳಿದ್ದಾರೆ.

ಶ್ರೀ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್ ಎನ್.ಆರ್.ಕಾಲನಿಯಲ್ಲಿ ಶನಿವಾರ ಆಯೋಜಿಸಿದ್ದ ‘ಮಹಿಳಾ ಉದ್ದಿಮೆದಾರರಿಗೆ ಸಾಲ ಸೌಲಭ್ಯ ವಿತರಣಾ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ವ ಉದ್ಯೋಗ ಆರಂಭಿಸುವ ಮೂಲಕ ಮಹಿಳೆಯರು ಸ್ವಾವಲಂಬಿಯಾಗಬೇಕು ಎನ್ನವ ಉದ್ದೇಶದಿಂದ ಬ್ಯಾಂಕ್ ಭದ್ರತೆ ಇಲ್ಲದೆ ಸಾಲ ನೀಡುತ್ತಿದೆ. ಈ ಮೂಲಕ ನಿಮ್ಮ ಅಭಿವೃದ್ಧಿ ಮಾತ್ರವಲ್ಲದೆ ದೇಶದ ಅಭಿವೃದ್ಧಿಗೂ ಸಹಕಾರಿಯಾಗಿದೆ. ಉದ್ಯೋಗದಲ್ಲಿ ಯಶಸ್ಸು ಗಳಿಸುವ ಮೂಲಕ ಸಕಾಲದಲ್ಲಿ ಸಾಲ ಮರುಪಾವತಿ ಮಾಡಬೇಕೆಂದು ಕಿವಿಮಾತು ಹೇಳಿದರು.

ದೇಶದಲ್ಲಿ ಸ್ತ್ರೀ ಶಕ್ತಿ ಸಂಘಗಳಿಗೆ ಪ್ರತಿ ವರ್ಷ ಶೇ.4 ಬಡ್ಡಿ ದರದಲ್ಲಿ 2 ಸಾವಿರ ಕೋಟಿ ರೂ. ಸಾಲ ನೀಡಲಾಗುತ್ತಿದೆ. ಬಹಳಷ್ಟು ಮಹಿಳೆಯರು ಸಾಲ ಪಡೆದು ಉದ್ಯೋಗ ಆರಂಭಿಸಿ ಯಶಸ್ಸು ಗಳಿಸಿದ್ದಾರೆ. ಬಹಳಷ್ಟು ಜನರಿಗೆ ಕೆಲಸ ಕೂಡ ನೀಡಿದ್ದಾರೆ ಎಂದು ಸಿ.ಎನ್.ದೇವರಾಜ್ ಹೇಳಿದರು. ಖಾಸಗಿ ಸುದ್ದಿವಾಹಿನಿಯ ನಿರೂಪಕಿ ಸ್ಮಿತಾ ರಂಗನಾಥ್, ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರು, ಫಲಾನುಭವಿಗಳು ಸೇರಿ ಮತ್ತಿತರರಿದ್ದರು.

1 ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗೆ ಯಾವುದೇ ಭದ್ರತೆ ಇಲ್ಲದೆ ಸಾಲ ನೀಡುವ ಮೂಲಕ, ಸ್ವ ಉದ್ಯೋಗ ಆರಂಭಿಸಲು ಮಹಿಳೆಯರಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ಒಂದು ಹೆಣ್ಣು ಸಬಲವಾದರೆ ಅವರ ಕುಟುಂಬ ಸಬಲವಾದಂತೆ ಎನ್ನುವ ಭಾವನೆ ನಮ್ಮ ಬ್ಯಾಂಕಿನದ್ದು. ಇದರ ಸದುಪಯೋಗ ಪಡೆದುಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ಬ್ಯಾಂಕಿನ ವಿಭಿನ್ನ ಯೋಜನೆಗಳ ಉಪಯೋಗವನ್ನು ಗ್ರಾಹಕರು ಸದ್ಬಳಕೆ ಮಾಡಿಕೊಳ್ಳಬೇಕು.

| ಡಾ.ಎಂ.ಆರ್.ವೆಂಕಟೇಶ್, ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ.