ಕೊಳ್ಳೇಗಾಲ ತಾಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಉತ್ತಂಬಳ್ಳಿ ಮೇಲ್ಸೆತುವೆ ಕುಸಿತವಾಗಿರುವ ಸ್ಥಳಕ್ಕೆ ಮಾಜಿ ಸಚಿವ ಎನ್.ಮಹೇಶ್ ಭೇಟಿ ನೀಡಿ ವೀಕ್ಷಣೆ ಮಾಡಿದರು. ಎಸ್.ಬಾಲರಾಜು ಇತರರು ಇದ್ದರು. 
ಜಿಲ್ಲೆ

ಉತ್ತಂಬಳ್ಳಿ ಮೇಲ್ಸೇತುವೆ ತಕ್ಷಣ ದುರಸ್ತಿಪಡಿಸಿ

ಮಾದೇಶ್ ತಿ.ನರಸೀಪುರ

ಕೊಳ್ಳೇಗಾಲ: ರಾಷ್ಟ್ರೀಯ ಹೆದ್ದಾರಿ(948) ಉತ್ತಂಬಳ್ಳಿ ಮೇಲ್ಸೇತುವೆ ಕುಸಿತವಾಗಿರುವ ಸ್ಥಳಕ್ಕೆ ಸೋಮವಾರ ಮಾಜಿ ಸಚಿವ ಎನ್.ಮಹೇಶ್ ಭೇಟಿ ನೀಡಿ ಪರಿಶೀಲಿಸಿದರು.

ಮೇಲ್ಸೆತುವೆಯಲ್ಲಿ ರಸ್ತೆ ಹಾಗೂ ತಡೆಗೋಡೆ ಕುಸಿದಿರುವುದನ್ನು ವೀಕ್ಷಣೆ ಮಾಡಿದ ಬಳಿಕ ಮಾತನಾಡಿ, ಉತ್ತಂಬಳ್ಳಿ ಮಾರ್ಗಮಧ್ಯೆ ಸಂಚರಿಸುವಾಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನೋಡಿದಾಗಲೆಲ್ಲ ಕಾಮಗಾರಿ ಕಳಪೆಯಾಗಿದೆ ಅನಿಸುತ್ತಿತ್ತು. ಅಂತೆಯೇ, ಮೇಲ್ಸೇತುವೆ ಕುಸಿದಿದೆ ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಥವಾ ಚಾಮರಾಜನಗರ ಸಂಸದರ ಪುಣ್ಯ. ಯಾರಿಗೂ ಈ ಅವಘಡದಲ್ಲಿ ಅಪಾಯ ಸಂಭವಿಸಿಲ್ಲ. ನಾನೇ ಭೇಟಿ ನೀಡಿ ಸ್ಥಳದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಂಬಂಧಿಸಿದ ಅಧಿಕಾರಿ ವಿಶ್ವ ಅವರೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿದಾಗ ಈಗಾಗಲೇ ಸ್ಥಳ ವೀಕ್ಷಣೆ ಮಾಡಿದ್ದೇವೆ. ದುರಸ್ತಿ ಕಾರ್ಯ ನಡೆಸುವುದಾಗಿ ತಿಳಿಸಿದ್ದಾರೆ. ಮೇಲ್ಸೆತುವೆ ಬಹುಪಾಲು ಹಾನಿಗೊಳಗಾಗಿದೆ. ಹೆದ್ದಾರಿ ಅಧಿಕಾರಿಗಳು ಸರಿಪಡಿಸುವವರೆಗೂ ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು. ಸಮರೋಪಾದಿಯಲ್ಲಿ ದುರಸ್ತಿ ಕೆಲಸ ಆಗಬೇಕೆಂದು ಆಗ್ರಹಿಸಿದರು.

ಮಾಜಿ ಶಾಸಕ ಎಸ್.ಬಾಲರಾಜ್ ಮಾತನಾಡಿ, ರಸ್ತೆ ಅಭಿವೃದ್ಧಿಗೆ ಗ್ರಾವೆಲ್ ಮಣ್ಣನ್ನು ಸಮರ್ಪಕವಾಗಿ ಬಳಸಿಲ್ಲ. ಆದ್ದರಿಂದ ಈ ದುರಂತಕ್ಕೆ ಕಾರಣವಾಗಿದೆ. ಸಂಬಂಧಪಟ್ಟ ಇಂಜಿನಿಯರ್‌ಗಳನ್ನು ಅಮಾನತು ಮಾಡಬೇಕು. ಸಂಸದರು ಇನ್ನೂ ವೀಕ್ಷಣೆಗೆ ಬಾರದಿರುವುದು ದುರಂತ. ಈ ಧೋರಣೆ ಮುಂದುವರಿದರೆ ಪ್ರತಿಭಟನೆ ಮಾಡಲಾಗುತ್ತದೆ ಎಂದರು.

ಚಾಮರಾಜನಗರ ಸಂಸದ ಸುನೀಲ್ ಬೋಸ್ ಬೇಗ ಎದ್ದೇಳಬೇಕು. ಬೆಳಗ್ಗೆಯೇ ಎದ್ದೇಳಬೇಕು. ಮೇಲ್ಸೆತುವೆ ಕುಸಿತವಾಗಿರುವುದನ್ನು ನೋಡಬೇಕು ಎಂದು ಮಾಜಿ ಸಚಿವ ಎನ್.ಮಹೇಶ್ ಆಕ್ರೋಶ ಹೊರಹಾಕಿದರು. ಈ ಅವಘಡವಾದಾಗ ನಾನು ಬಾಗಲಕೋಟೆಯಲ್ಲಿದ್ದೆ. ಅಲ್ಲಿಂದ ಬಂದು ನೋಡಿದ್ದೇನೆ. ಮೈಸೂರಿನಿಂದ ಸಂಸದರು ಬರಲು ಎಷ್ಟು ಗಂಟೆ ಬೇಕಾಗುತ್ತದೆ. ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರೂ ಬಂದಿಲ್ಲ. ಜಿಲ್ಲಾಧಿಕಾರಿ ಶಿಲ್ಪಾನಾಗ್ ಬಂದಿಲ್ಲ. ಶಾಸಕ ಎ.ಆರ್.ಕೃಷ್ಣಮೂರ್ತಿ, ಎಸ್ಪಿ ಬಿ.ಟಿ ಕವಿತಾ ಅವರು ಮಾತ್ರ ಬಂದಿದ್ದಾರೆ. ನಿಜಕ್ಕೂ ಈ ಜವಾಬ್ದಾರಿಯನ್ನು ಸಂಸದರು ತೆಗೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಸಂಸದ ಸುನೀಲ್ ಬೋಸ್ ಮೊದಲು ಈ ಸಮಸ್ಯೆಯನ್ನು ನೋಡಲಿ ಎಂದು ಒತ್ತಾಯಿಸಿದರಲ್ಲದೆ, ನಾನು ಅವರೊಂದಿಗೆ ಮಾತನಾಡುತ್ತೇನೆ ಎಂದು ಎನ್.ಮಹೇಶ್ ಹೇಳಿದರು.

ಬಿಜೆಪಿ ಎಸ್ಸಿ ಮೋರ್ಚಾ ತಾಲೂಕು ಘಟಕದ ಅಧ್ಯಕ್ಷ ಎಸ್.ಸಿದ್ದಪ್ಪಾಜಿ, ಮುಖಂಡ ಕೆ.ಕೆ.ಮೂರ್ತಿ, ಪ್ರಭು, ಸೋಮಣ್ಣ ಉಪ್ಪಾರ್ ಇತರರು ಇದ್ದರು.