ಮುಂಡರಗಿ: ತಾಲೂಕಿನ ಗಂಗಾಪುರ ಗ್ರಾಮದ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಅಂದಾಜು 2 ಕಿ.ಮೀ. ಮುಖ್ಯ ರಸ್ತೆ (ಕಪ್ಪತಗುಡ್ಡ ಭಾಗದ ರಸ್ತೆ) ಸಂಪೂರ್ಣ ಹದಗೆಟ್ಟು ಕೆಸರು ಗದ್ದೆಯಂತಾಗಿದೆ. ಹೀಗಾಗಿ, ಈ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತುಂಬ ತೊಂದರೆಯಾಗಿದೆ.
ಈ ಭಾಗದ ಜಮೀನುಗಳಲ್ಲಿ ರೈತರು ಕಬ್ಬು, ಗೋವಿನಜೋಳ, ಹತ್ತಿ, ರೇಷ್ಮೆ, ಸೂರ್ಯಕಾಂತಿ ಮತ್ತಿತರ ಬೆಳೆ ಬೆಳೆದಿದ್ದಾರೆ. ಮುಂದಿನ ದಿನಗಳಲ್ಲಿ ಈ ಮಾರ್ಗವಾಗಿ ಜಮೀನಿಗೆ ತೆರಳಿ ಫಸಲನ್ನು ಮನೆಗೆ ತರಲು ತೊಂದರೆಯಾಗಲಿದೆ. ಗೋವಿನಜೋಳ ಬೆಳೆಗೆ ಗೊಬ್ಬರ ಹಾಕುವ ಕಾರ್ಯ ನಡೆದಿದೆ. ಹತ್ತಿ, ಸೂರ್ಯಕಾಂತಿ ಬೆಳೆಯನ್ನು ಕಟಾವು ಹಂತಕ್ಕೆ ಬಂದಿವೆ. ಕೆಸರು ಗದ್ದೆಯಂತಾಗಿರುವ ರಸ್ತೆಯಲ್ಲಿ ವಾಹನ, ಎತ್ತಿನ ಬಂಡಿ ತೆಗೆದುಕೊಂಡು ಹೋಗಲು ಆಗುತ್ತಿಲ್ಲ. ಹದಗೆಟ್ಟ ರಸ್ತೆಯನ್ನು ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ದುರಸ್ತಿಗೊಳಿಸಲು ಮುಂದಾಗಬೇಕು ಎಂದು ಗಂಗಾಪುರ ರೈತರಾದ ತಿಮ್ಮಣ್ಣ ದಾಸರ, ದೇವೇಂದ್ರ ಸೂಲಿ, ಪ್ರವೀಣ ಬೂದಿಹಾಳ, ಸುಭಾಸ ಹಳ್ಳಿಕೇರಿ, ಕೊಟ್ರಪ್ಪ ಹಳ್ಳಿ, ಶಿವಯ್ಯ ಹಿರೇಮಠ, ಯಲ್ಲಪ್ಪ ಪೂಜಾರ, ಬಸಲಿಂಗಪ್ಪ ಸೂಲಿ ಮೊದಲಾದವರು ಒತ್ತಾಯಿಸಿದ್ದಾರೆ.