ಜಿಲ್ಲೆ

ಮ್ಯಾನ್‌ಹೋಲ್ ಬಳಿ ರಸ್ತೆಕುಸಿತ ಭಾಗ ದುರಸ್ತಿಗೊಳಿಸಿ: ಸುರಳ್ಕರ್ ವಿಕಾಸ್ ಕಿಶೋರ್

ಬೆಂಗಳೂರು: ಬಿಬಿಎಂಪಿ ಪಶ್ಚಿಮ ವಲಯ ವ್ಯಾಪ್ತಿಯಲ್ಲಿನ ರಸ್ತೆಗಳಲ್ಲಿ ಒಳಚರಂಡಿ ಚೇಂಬರ್‌ಗಳ ಬಳಿ ರಸ್ತೆ ಭಾಗ ಕುಸಿದಿದ್ದರೆ, ಅದನ್ನು ಕೂಡಲೆ ದುರಸ್ತಿಪಡಿಸಲು ವಲಯ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸೋಮವಾರ ಕಾಲ್ನಡಿಗೆ ಮೂಲಕ ಪರಿಶೀಲಿಸಿ ಮಾತನಾಡಿದ ಅವರು, ರಸ್ತೆಗಳ ಭಾಗದಲ್ಲಿ ಒಳಚರಂಡಿಗಳ ಚೇಂಬರ್‌ಗಳಿರುವ ಕಡೆ ಸರಿಯಾಗಿದೇ ಇಲ್ಲವೇ ಎಂಬುದನ್ನು ಪರಿಶೀಲಿಸಿ, ದುರಸ್ತಿ ಕಾರ್ಯ ಕೈಗೊಳ್ಳಬೇಕಿದ್ದಲ್ಲಿ ಕೂಡಲೇ ಸರಿಪಡಿಸಲು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಪಾದಚಾರಿ ಮಾರ್ಗಗಳು ಸುರಕ್ಷಿತವಾಗಿ ನಾಗರಿಕರಿಗೆ ಓಡಾಡಲು ಅನುಕೂಲವಾಗಿರುವ ರೀತಿಯಲ್ಲಿರಬೇಕು. ಮಲ್ಲೇಶ್ವರ ವ್ಯಾಪ್ತಿಯಲ್ಲಿ 500 ಮೀ. ಉದ್ದದ ರಸ್ತೆಯಲ್ಲಿ ನಿರ್ಬಂಧಿತ ಮಾರಾಟ ವಲಯವನ್ನು ಗುರುತಿಸಲಾಗಿದೆ. ಈ ಸಂಬಂಧ ಆ ಜಾಗದಲ್ಲಿ ಫುಟ್‌ಪಾತ್ ಒತ್ತುವರಿ ಮಾಡಿಕೊಂಡು ಮಾರಾಟ ಮಾಡಲು ಅನುಮತಿ ನೀಡದಂತೆ ಕ್ರಮವಹಿಸಲು ಸೂಚಿಸಲಾಯಿತು.

ಶಿಸ್ತುಕ್ರಮದ ಎಚ್ಚರಿಕೆ:

ಮಲ್ಲೇಶ್ವರದ 4ನೇ ಮುಖ್ಯರಸ್ತೆ ಬದಿ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಪಾದಚಾರಿ ಮಾರ್ಗದಲ್ಲಿ ಶೆಡ್ ನಿರ್ಮಿಸಿಕೊಂಡಿದ್ದಾರೆ. ಈ ಕೂಡಲೇ ಶೆಡ್ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಯಿತು.

ಈ ವೇಳೆ ಪಶ್ಚಿಮ ವಲಯದ ಕಾರ್ಯಪಾಲಕ ಅಭಿಯಂತರರು, ಘನತ್ಯಾಜ್ಯ ನಿರ್ವಹಣಾ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.