ಜಿಲ್ಲೆ

ರೇಣುಕಾಚಾರ್ಯರ ಲೀಲೆ, ಪವಾಡ ಅಪಾರ

ಬಸವರಾಜ ವೀರಪ್ಪ ಗರಗ

ನರೇಗಲ್ಲ: ಶ್ರೀ ಜಗದ್ಗುರು ರೇಣುಕಾಚಾರ್ಯರು ಮಾಡಿದ ಪವಾಡ, ತೋರಿದ ಲೀಲೆಗಳು ಅನಂತ. ಭೂಮಂಡಲದಲ್ಲಿ ಶಿವನಾಗಿ ಸಂಚರಿಸಿ ಕೆಲಕಾಲ ಗುಪ್ತವಾಗಿಯೂ ಕೆಲಕಾಲ ಪ್ರಕಟವಾಗಿಯೂ ಶಿವನ ಅಣತಿಯಂತೆ ಸರ್ವಕಾರ್ಯಗಳನ್ನು ಪೂರ್ಣಗೊಳಿಸಿ ಮತ್ತೆ ಕೊಲನುಪಾಕ ಸುಕ್ಷೇತ್ರಕ್ಕೆ ದಯಮಾಡಿಸಿ ಶ್ರೀ ಸೋಮೇಶ್ವರ ಮಹಾಲಿಂಗದಲ್ಲೇ ಲೀನವಾಗಿದ್ದು ಅವಿಸ್ಮರಣೀಯ ಎಂದು ಹಿರಿಯ ಸಾಹಿತಿ ಎಂ.ವಿ. ಹಿರೇವಡೆಯರ ಹೇಳಿದರು.

ಪಟ್ಟಣದ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ಆಚಾರ ವಿಚಾರಗಳ ಸಮನ್ವಯ ಸಂಗಮದಂತಿರುವ ವೀರಶೈವ ಧರ್ಮ ಸಂಸ್ಥಾಪನೆಯ ಕೀರ್ತಿ ಆದಿಜಗದ್ಗುರು ಶ್ರೀ ರೇಣುಕಾದಿ ಪಂಚಾಚಾರ್ಯರಿಗೆ ಸಲ್ಲುತ್ತದೆ ಎಂದರು.

ಪಪಂ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಮಾತನಾಡಿ, ಶ್ರೀ ಜಗದ್ಗುರು ರೇಣುಕರು ತಮ್ಮ ಜೀವನವನ್ನು ಧಾರ್ವಿುಕ ಕ್ರಾಂತಿಗೆ ಮಾತ್ರ ಮೀಸಲಿಡದೇ ಸಾಮಾಜಿಕ ಕ್ರಾಂತಿಗೆ ಪರಿವರ್ತಿಸಿದರು. ಪೌರಾಣಿಕ ವರ್ಚಸ್ಸಿನಲ್ಲಿ ಬಂಧಿತನಾಗಿದ್ದ ಅಗಸ್ಱ ಮಹರ್ಷಿಗೆ ಜ್ಞಾನದೀಕ್ಷೆ ನೀಡಿ ಆಧ್ಯಾತ್ಮಿಕ ವರ್ಚಸ್ಸನ್ನು ಕರುಣಿಸಿ ಅಂದೇ ದಲಿತೋದ್ಧಾರ ಕಾರ್ಯಕ್ಕೆ ನಾಂದಿ ಹಾಡಿದ್ದಾರೆ. ಅಲ್ಲದೆ, ವಿಭೀಷಣನ ಪ್ರಾರ್ಥನೆಗೆ ಕಟಿಬದ್ಧರಾಗಿ ನವಕೋಟಿಲಿಂಗ ಸ್ಥಾಪನೆಯ ಸಂಕಲ್ಪ ಹೊಂದಿದ್ದ ರಾವಣನ ಜೀವನವನ್ನು ಕೃತಾರ್ಥಗೊಳಿಸಲು ಏಕಕಾಲಕ್ಕೆ 3 ಕೋಟಿ ಗುರುರೂಪ ಧರಿಸಿ 3 ಕೋಟಿ ಶಿವಲಿಂಗಗಳನ್ನು ಸ್ಥಾಪಿಸಿದರು. ಆ ಮೂಲಕ ರಾವಣನಿಗೆ ಅಂಟಿಕೊಂಡಿದ್ದ ಅಸುರ ಸಾರ್ವಭೌಮ ಪಟ್ಟವನ್ನು ಅಳಿಸಿ ಭಕ್ತಸಾರ್ವಭೌಮನನ್ನಾಗಿ ಪರಿವರ್ತಿಸಿ ಆತನಿಗಿರುವ ಲಿಂಗನಿಷ್ಠೆ, ಶಿವಭಕ್ತಿಯನ್ನು ಜಗಜ್ಜಾಹೀರಗೊಳಿಸಿದ ಯುಗಪುರುಷರಾಗಿದ್ದಾರೆ. ಈ ಅದ್ಭುತ ಶಿವಲೀಲೆಯ ಕುರುಹುವನ್ನು ಶ್ರೀಲಂಕಾ ದೇಶದ ಜಾಫ್ನಾ ಸಮೀಪದ ಕಿರುಮಲೈ ಎಂಬ ಗ್ರಾಮದಲ್ಲಿ ರೇಣುಕಾಶ್ರಮ, ರೇಣುಕವನ ಮಠಗಳು ಹಾಗೂ ಶಿವಲಿಂಗಗಳನ್ನು ಇಂದಿಗೂ ಕಾಣಬಹುದು ಎಂದು ತಿಳಿಸಿದರು.

ಪಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಸ್ಥಾಯಿ ಕಮಿಟಿ ಚೇರ್ಮನ್ ಮುತ್ತಪ್ಪ ನೂಲ್ಕಿ, ಈರಪ್ಪ ಜೋಗಿ, ಮುಖ್ಯಾಧಿಕಾರಿ ಮಹೇಶ ನಿಡಶೇಶಿ, ಪ್ರಭುಸ್ವಾಮಿ ಅರವಟಗಿಮಠ, ವೀರಯ್ಯ ಚೌಕಿಮಠ, ಸಂಗಯ್ಯ ಶಾಂತಯ್ಯನಮಠ, ಮಲ್ಲಯ್ಯ ಗುಂಡಗೋಪುರಮಠ, ಪ್ರಶಾಂತ ಹಿರೇಮಠ, ರುದ್ರಮುನಿ ಹಿರೇಮಠ, ಡಾ. ರಾಜೇಂದ್ರ ಗಚ್ಚಿನಮಠ, ದೊಡ್ಡಯ್ಯ ಅರವಟಗಿಮಠ, ಶೇಖಪ್ಪ ಹೊನವಾಡ, ಆರೀಫ್ ಮಿರ್ಜಾ, ಜಮೀಲಾಬೇಗಂ ಬಂಕಾಪೂರ, ನಜ್ಮಾ ಬೇಲೇರಿ, ಇತರರಿದ್ದರು.