ತಿ.ನರಸೀಪುರದಲ್ಲಿ ಮಂಗಳವಾರ ವೀರಶೈವ ಸಮಾಜ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಆದಿ ಜಗದ್ಗುರು ರೇಣುಕಾ ಚಾರ್ಯರ ಜಯಂತಿ ಯುಗಮಾನೋತ್ಸವ, ಗೌರವ ಗುರುರಕ್ಷೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಎಂ.ನಂಜುಂಡಸ್ವಾಮಿ ಉದ್ಘಾಟಿಸಿದರು. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಟಿ.ಎಸ್.ಶಾಂತರಾಜು, ಎನ್.ಶಿವಪ್ರಸಾದ್, ವೀರೇಶ್, ಆರ್.ಸಿದ್ದಲಿಂಗಸ್ವಾಮಿ ಇತರರು ಇದ್ದರು. 
ಜಿಲ್ಲೆ

ಮಾನವೀಯ ಮೌಲ್ಯ ಸಾರಿದ ರೇಣುಕಾಚಾರ್ಯ

ಲೋಕೇಶ್ ಮನು. ಡಿ

ತಿ.ನರಸೀಪುರ:ವಿಶ್ವ ಬಂಧುತ್ವದ ಮಾನವೀಯ ಮೌಲ್ಯಗಳನ್ನು ಸಾರಿದ ವೀರಶೈವ ಧರ್ಮದ ಸಂಸ್ಥಾಪನಾಚಾರ್ಯ ಜಗದ್ಗುರು ರೇಣುಕಾಚಾರ್ಯರ ಜೀವನ, ತತ್ವ-ಸಿದ್ಧಾಂತಗಳು ಸುಖ-ಶಾಂತಿಯ ಬದುಕಿನ ಮೂಲಸೆಲೆಯಾಗಿವೆ ಎಂದು ಮುಡುಕುತೊರೆ ತೋಪಿನ ಮಠದ ಶ್ರೀಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ವಾಸವಿ ಮಹಲ್‌ನಲ್ಲಿ ವೀರಶೈವ ಸಮಾಜ ಸೇವಾ ಸಮಿತಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಶ್ರೀ ಆದಿಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಮತ್ತು ಗೌರವ ಗುರು ರಕ್ಷೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕರ್ಮವನ್ನು ಕಳೆದು ಧರ್ಮವನ್ನು ಬಿತ್ತಿ ಬದುಕನ್ನು ಬಂಗಾರಗೊಳಿಸಿದ ಕೀರ್ತಿ ಜಗದ್ಗುರು ರೇಣುಕಾಚಾರ್ಯ ರದು. ಜಾತಿ, ಮತ, ಪಂಥಗಳ ಗಡಿ ಮೀರಿ ತನು-ಮನ ಶುದ್ಧಿಗೆ ಆದರ್ಶ ಮೌಲ್ಯಗಳ ಪರಿಪಾಲನೆ ಮಹತ್ವವನ್ನು ಸಾರಿದ ಶ್ರೇಯಸ್ಸು ಅವರದು ಎಂದರು.

ಬಹುಜನ್ಮದ ಪುಣ್ಯದ ಫಲವಾಗಿ ಪ್ರಾಪ್ತವಾದ ಮಾನವ ಜೀವನ ಸಾರ್ಥಕಪಡಿಸಿಕೊಳ್ಳಬೇಕಾಗಿದೆ. ಜಗದ್ಗುರು ರೇಣುಕಾ ಚಾರ್ಯರ ದೂರದರ್ಶಿತ್ವದ ವಿಚಾರಧಾರೆಗಳು ಎಲ್ಲ ವರ್ಗದ ಜನರ ಕಲ್ಯಾಣಕ್ಕೆ ಭದ್ರ ಬುನಾದಿ ಒದಗಿಸುತ್ತವೆ. ಅಧರ್ಮದಿಂದ ಕೂಡಿದ ಸಮಾಜವನ್ನು ಧರ್ಮ ಮಾರ್ಗದೆಡೆಗೆ ಕರೆದೊಯ್ಯಲು ಧಾರ್ಮಿಕ ಕಾರ್ಯಕ್ರಮಗಳ ಅವಶ್ಯಕತೆ ಬಹುಮುಖ್ಯ. ಮನುಷ್ಯ ತನ್ನ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಅದಕ್ಕಾಗಿ ಶಾಂತಚಿತ್ತತೆ ಬಹುಮುಖ್ಯವಾಗಿದೆ. ಶಾಂತಿಯನ್ನು ಮನಸ್ಸಿಗೆ ತೆಗೆದುಕೊಂಡರೆ ಮನಸ್ಸು ನಿರ್ಮಲವಾಗುತ್ತೆ. ಮನಸ್ಸು ಪರಿಶುದ್ಧತೆಯಿಂದ ಇದ್ದಾಗ ಮಾತ್ರ ಯಾವುದೇ ಕೆಲಸವನ್ನು ಏಕಾಗ್ರತೆಯಿಂದ ಮಾಡಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಚಾಮರಾಜನಗರ ಹಾಲು ಒಕ್ಕೂಟ(ಕುದೇರು)ದ ಅಧ್ಯಕ್ಷ ಎಂ.ನಂಜುಂಡಸ್ವಾಮಿ ಮಾತನಾಡಿ, ನಾವು ಯಾವುದೇ ಜಯಂತಿಯನ್ನು ಆಚರಣೆ ಮಾಡಬೇಕಾದರೆ ಅದರ ಮೂಲ ಉದ್ದೇಶ ಮತ್ತು ಅದರ ಆಶಯಗಳನ್ನು ಮೊದಲು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ನಾವು ಚೆನ್ನಾಗಿದ್ದು ಸಮಾಜವನ್ನು ಚೆನ್ನಾಗಿ ಇಡುವುದರ ಮೂಲಕ ನಮ್ಮ ಮಕ್ಕಳಿಗೆ ಆದರ್ಶವಾಗಿ ಬದುಕಬೇಕು. ನಾವು ಒಬ್ಬ ಆದರ್ಶ ವ್ಯಕ್ತಿಯಾಗಿ ಬದುಕಿದಾಗ ಮುಂದಿನ ಪೀಳಿಗೆಗೆ ಮಾದರಿಯಾಗಿ ಒಂದು ಉತ್ತಮ ಸಮಾಜವನ್ನು ಕಟ್ಟುವುದಕ್ಕೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ವಿಶ್ವ ಮಹಿಳಾ ಖೋಖೋ ಚಾಂಪಿಯನ್ ಬಿ.ಚೈತ್ರಾ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಪಟ್ಟಣದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಜಗದ್ಗುರು ರೇಣುಕಾ ಚಾರ್ಯ ಸಭಾ ಭವನದ ನೀಲಿನಕ್ಷೆಯನ್ನು ಹರಗುರು ಚರಮೂರ್ತಿಗಳು ಹಾಗೂ ಗಣ್ಯರು ಬಿಡುಗಡೆ ಮಾಡಿದರು. ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದ ಕೆ.ಎಂ.ಮಲ್ಲಿಕಾರ್ಜುನ ಸ್ವಾಮೀಜಿ ಸಭಾ ಭವನ ನಿರ್ಮಾಣ ಕಾರ್ಯಕ್ಕೆ 1.08 ಲಕ್ಷ ರೂ. ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದರೆ, ಚಾಮರಾಜನಗರ ಹಾಲು ಒಕ್ಕೂಟದ ಅಧ್ಯಕ್ಷ ಎಂ.ನಂಜುಂಡಸ್ವಾಮಿ ಒಂದು ಕೊಠಡಿ ಕಟ್ಟಿಸಿಕೊಡುವುದಾಗಿ ಭರವಸೆ ನೀಡಿದರು.

ಪಿಯು ಪರೀಕ್ಷೆಯಲ್ಲಿ ಹೆಚ್ವು ಅಂಕ ಗಳಿಸಿದ ವಿದ್ಯಾರ್ಥಿನಿಯರಾದ ಶರಣ್ಯ, ಮೋನಿಷಾ ಹಾಗೂ ಸ್ವರ್ಣಗೌರಿ ಅವರನ್ನು ಪುರಸ್ಕರಿಸಲಾಯಿತು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀ ತ್ರೈಂಬಕೇಶ್ವರ ಮಠದ ಶ್ರೀ ವೀರೇಶ, ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಗವಿ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಹೊಸೂರು ಹುಂಡಿ ಮಠದ ರಾಜಶೇಖರ ಸ್ವಾಮೀಜಿ, ಕೀಲು ಮತ್ತು ಮೂಳೆ ತಜ್ಞ ಡಾ.ಎಸ್.ಮಹದೇವಪ್ರಸಾದ್, ಜೆಎಸ್ ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವ ವಿದ್ಯಾನಿಲಯದ ಪ್ರಾದ್ಯಾಪಕಿ ಡಾ.ಎಚ್.ಆರ್.ಚನ್ನಮ್ಮ, ನೆಲಮಂಗಲ ಟೌನ್ ರುದ್ರೇಶ್ವರ ಸ್ವಾಮಿ ದೇವಾಲಯ ದತ್ತಿ ಸಮಿತಿ ಧರ್ಮದರ್ಶಿ ಎನ್.ಗಂಗರಾಜು, ಮದ್ದೂರು ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಸಿ.ಜಿ.ಗೌರಿಶಂಕರ, ನರಸೀಪುರ ಅಧ್ಯಕ್ಷ ಸಿ.ಎಂ.ಪ್ರಕಾಶ್, ಕಬಿನಿ ನೀರಾವರಿ ಇಲಾಖೆಯ ಪ್ರಥಮ ದರ್ಜೆ ಲೆಕ್ಕ ಸಹಾಯಕ ಎನ್.ರವೀಂದ್ರ, ಜಹಗೀರ್ ದಾರ್ ಜೆ.ಬಿ.ಕುಮಾರಸ್ವಾಮಿ, ಮಂಜು, ವೀರಶೈವ ಸಮಾಜ ಸೇವಾ ಸಮಿತಿಯ ಅಧ್ಯಕ್ಷ ಟಿ.ಎಸ್.ಶಾಂತರಾಜು, ಉಪಾಧ್ಯಕ್ಷ ಎನ್.ಶಿವಪ್ರಸಾದ್, ಕಾರ್ಯದರ್ಶಿ ಸಿ.ವೀರೇಶ್, ಸಹ ಕಾರ್ಯದರ್ಶಿ ಎಂ.ವೀರೇಶ್, ಖಜಾಂಚಿ ಆರ್.ಸಿದ್ದಲಿಂಗಸ್ವಾಮಿ, ಸಂಚಾಲಕ ಬಿ ನಂದೀಶ್ ಇತರರು ಇದ್ದರು.