ಜಿಲ್ಲೆ

ರೇಣುಕಾಚಾರ್ಯ ಜಯಂತಿ 27ರಂದು

ವಿಜಯವಾಣಿ ಸುದ್ದಿಜಾಲ ಧಾರವಾಡ

ವೀರಶೈವ ಧರ್ಮ ಸಂಸ್ಥಾಪಕ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಮಾ. 27ರಂದು ಹೊಸಯಲ್ಲಾಪುರದ ಮಳೆಮಲ್ಲೇಶ್ವರ ಹಿರೇಮಠದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಆಚರಣ ಸಮಿತಿ ಅಧ್ಯಕ್ಷ ರಾಜೇಂದ್ರ ಹಿರೇಮಠ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವನಗರ ಕಾಶಿ ಶಾಖಾಮಠದ ಡಾ. ರಾಜಶೇಖರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಜಯಂತಿ ನಡೆಯಲಿದೆ. ಜಿಲ್ಲೆಯ ವಿವಿಧ ಭಾಗಗಳ ಸಮಾಜದ 1500ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ಅಂದು ಸಂಜೆ 4ಕ್ಕೆ ಶ್ರೀ ಮಠದಿಂದ ರೇಣುಕಾಚಾರ್ಯರ ಭಾವಚಿತ್ರ ಮೆರವಣಿಗೆಯು 108 ಕುಂಭ-ಆರತಿ ಹಾಗೂ ಹಲವು ಜನಪದ ವಾದ್ಯ-ಮೇಳದೊಂದಿಗೆ ಹೊರಡಲಿದೆ. ನಗರದ ಕಾಮನಕಟ್ಟಿ, ಪಂಚ ಕಚೇರಿ ಓಣಿ, ಗಾಂಧಿಚೌಕ ಮೂಲಕ ಹೆಬ್ಬಳ್ಳಿ ಅಗಸಿ, ನಗರೇಶ್ವರ ಗುಡಿ, ಮಟ್ಟಿ ಪರಪ್ಪನಕೂಟ, ಉಡುಪಿ ಓಣಿ, ಹೊಸ ಓಣಿಯಿಂದ ಮರಳಿ ಹಿರೇಮಠಕ್ಕೆ ಮರುಳಲಿದೆ ಎಂದರು.

ಸರೋಜಾ ಪಾಟೀಲ, ಮುಂದಿನ ಪೀಳಿಗೆಗೆ ನಾವು ವಿದ್ಯಾಭ್ಯಾಸ ಹಾಗೂ ಆಸ್ತಿ ಮಾತ್ರ ನೀಡಿದರೆ ಸಾಲುದು. ಸಂಸ್ಕೃತಿ, ಪರಂಪರೆ ಸಹ ನೀಡಬೇಕು. ದಾರಿ ತಪ್ಪುತ್ತಿರುವ ಯುವ ಜನಾಂಗಕ್ಕೆ ಮಾರ್ಗದರ್ಶನ ಮಾಡಲು ಜಯಂತಿಗಳು ಅಗತ್ಯ. ಈ ಹಿನ್ನೆಲೆಯಲ್ಲಿ 5 ವರ್ಷಗಳಿಂದ ರೇಣುಕರ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಧಾರವಾಡ ಸೇರಿ ಜಿಲ್ಲೆಯ ವಿವಿಧ ಗ್ರಾಮಗಳಿಂದ ಜನರು ಆಗಮಿಸಲಿದ್ದಾರೆ ಎಂದರು.

ಮಂಜುನಾಥ ಹಿರೇಮಠ, ಅಮಿತ ಪಾಟೀಲ, ಇತರರು ಇದ್ದರು.