ಹೊನ್ನಾಳಿ: ಸಂವಿಧಾನ ರಚಿಸಿ ದೇಶವಾಸಿಗಳಿಗೆ ಅನುಕೂಲ ಕಲ್ಪಿಸಿದ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಅವಮಾನ ಮಾಡಿತ್ತು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದರು.
ಟಿ.ಬಿ. ವೃತ್ತದಲ್ಲಿ ಸೋಮವಾರ ತಾಲೂಕು ಬಿಜೆಪಿ ಘಟಕದಿಂದ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
ಇಡೀ ದೇಶದ ದಲಿತರಿಗೆ ನ್ಯಾಯ ಒದಗಿಸಿದ ಅಂಬೇಡ್ಕರ್ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಅವರ ವಿರುದ್ಧ ಅವರ ಆಪ್ತ ಸಹಾಯಕನನ್ನೇ ನಿಲ್ಲಿಸಿ ಸೋಲಿಸಿದರು. ಅಂದಿನ ಕಾಂಗ್ರೆಸ್ ನಾಯಕರು ತಮಗೆ ತಾವೇ ಭಾರತರತ್ನ ಕೊಟ್ಟು ಕೊಂಡರು. ಅವರಿಗೆ ಭಾರತರತ್ನ ನೀಡದೆ ಅಪಮಾನಿಸಿದರು. ಅಂತಹ ಕಾಂಗ್ರೆಸ್ ನಾಯಕರು ರಾಜಕೀಯ ಲಾಭಕ್ಕಾಗಿ ಅವರ ಫೋಟೊ ಹಾಗೂ ಹೆಸರು ಬಳಸಿ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.
ಸಮಾನತೆಯ ಹರಿಕಾರ ಅಂಬೇಡ್ಕರ್ ಅವರು ದಲಿತರ ಸಬಲೀಕರಣಕ್ಕೆ ನಾಂದಿ ಹಾಡಲು ಬೆಳಗಾವಿಯ ನಿಪ್ಪಾಣಿಗೆ ಭೇಟಿ ನೀಡಿ 100 ವರ್ಷ ತುಂಬಿದ ಹಿನ್ನೆಯಲ್ಲಿ ರಾಜ್ಯ ಬಿಜೆಪಿಯಿಂದ ಭೀಮಾ ಹೆಜ್ಜೆ 100 ಸಂಭ್ರಮ ರಥಯಾತ್ರೆ ಹಮ್ಮಿಕೊಂಡಿದ್ದು, ಇದರಲ್ಲಿ ಎಲ್ಲರೂ ಪಾಲ್ಗೊಳ್ಳೋಣ ಎಂದು ತಿಳಿಸಿದರು.
ಬಿಜೆಪಿ ಘಟಕದ ತಾಲೂಕು ಅಧ್ಯಕ್ಷ ಅರಕೆರೆ ನಾಗರಾಜ್, ಮಾಜಿ ಅಧ್ಯಕ್ಷ ಜೆ.ಕೆ. ಸುರೇಶ್, ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಉಮೇಶ್ ಮಾತನಾಡಿದರು.
ಮುಖಂಡರಾದ ದೊಡ್ಡೇರಿ ರಾಜಣ್ಣ, ಗಿರೀಶ್,ಬಾಬು ಹೋಬಳದಾರ್, ತರಗನಹಳ್ಳಿ ರಮೇಶ್, ಶಿವು ಹುಡೇದ್, ಬೀರಪ್ಪ, ಕುಳಗಟ್ಟೆ ರಂಗನಾಥ್, ಮಾರಿಕೊಪ್ಪ ಹನುಮಂತಪ್ಪ, ಮಾರುತಿನಾಯ್್ಕ ಸುರೇಂದ್ರನಾಯ್್ಕ ಇದ್ದರು.