ಡಾ. ಬಸವರಾಜ ಚನ್ನಪ್ಪ ಜಿಗಳೂರ 
ಜಿಲ್ಲೆ

ಖ್ಯಾತ ಉದ್ಯಮಿ ಡಾ. ಬಸವರಾಜ ಜಿಗಳೂರ ಇನ್ನಿಲ್ಲ

ಬಾಗಲಕೋಟೆ: ಬೆಂಗಳೂರಿನ ಬಸವೇಶ್ವರ ನಗರದ ನಿವಾಸಿ, ಮೂಲತಃ ಬಾಗಲಕೋಟೆಯ ಖ್ಯಾತ ಉದ್ಯಮಿ, ಬೆಂಗಳೂರಿನ ಅನುಭವ ಪ್ರಿಂಟರ್ಸ್ ಮಾಲೀಕರಾದ ಡಾ. ಬಸವರಾಜ ಚನ್ನಪ್ಪ ಜಿಗಳೂರ (80) ಹೃದಯಾಘಾತದಿಂದ ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಗ್ಗೆ ನಿಧನರಾದರು.

ಬಾಗಲಕೋಟೆಯ ಪ್ರಸಿದ್ಧ ಜಿ.ಎಚ್. ಚನ್ನಪ್ಪ ಬುಕ್‌ಸ್ಟಾಲ್ ಮಾಲೀಕರಾದ ಚನ್ನಪ್ಪ ಜಿಗಳೂರ ಅವರ ನಾಲ್ವರು ಪುತ್ರರ ಪೈಕಿ ಎರಡನೇಯವರಾದ ಡಾ. ಬಸವರಾಜ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನೆಲೆಸಿದ್ದರು.

ಡಾ. ಬಸವರಾಜ ಅವರು ಯುಎಸ್‌ಎ ಕೆಂಟುಕಿ ಯೂನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪದವಿಗೂ ಪಾತ್ರರಾಗಿದ್ದರು. ಬೆಂಗಳೂರ ಪ್ರಿಂಟರ್ಸ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಆರಂಭದಲ್ಲಿ ತಮ್ಮ ಕುಟುಂಬದ ಚನ್ನಪ್ಪ ಬುಕ್ ಸ್ಟಾಲ್‌ನಲ್ಲಿ ಕೆಲಸ ಮಾಡುತ್ತಿದ್ದ ಬಸವರಾಜ ಅವರು ಬಳಿಕ ತಮ್ಮದೇ ಮನೆತನದ ಬಸವರಾಜ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕಾಯಕ ಮುಂದುವರಿಸಿದರು. ಪ್ರಿಂಟಿಂಗ್ ಉದ್ಯಮದಲ್ಲಿ ಹೆಚ್ಚಿನ ಅನುಭವ ಪಡೆಯಲು 43 ವರ್ಷಗಳ ಹಿಂದೆ ಬಾಗಲಕೋಟೆಯಿಂದ ಮದ್ರಾಸ್‌ನ ರಿಜಿನಲ್ ಸ್ಕೂಲ್ ಆಫ್ ಪ್ರಿಂಟಿಂಗ್ ಟೆಕ್ನಾಲಜಿಯಲ್ಲಿ ಐದು ವರ್ಷ ಕಲಿತು, ಅಲ್ಲಿಂದ ಪ್ರಿಂಟಿಂಗ್ ಯಂತ್ರ ತಯಾರಿಸುವ ಜರ್ಮನಿಯ ಪ್ರಸಿದ್ಧ ಹೆಡಲ್‌ಬರ್ಗ್‌ನಲ್ಲಿ 11 ವರ್ಷ ಸೇವೆ ಸಲ್ಲಿಸಿ, ಅಲ್ಲಿಂದ ಅಪಾರ ಅನುಭವದೊಂದಿಗೆ ಬೆಂಗಳೂರಿಗೆ ಬಂದು ಪ್ರಿಂಟಿಂಗ್ ಪ್ರೆಸ್ ಖರೀದಿಸಿ, ಅನುಭವ ಪ್ರಿಂಟರ್ಸ್ ಮಾಲೀಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಡಾ. ಬಸವರಾಜ ಅವರಿಗೆ ಪತ್ನಿ ಲತಾ ಬ. ಜಿಗಳೂರ, ಪುತ್ರಿ ದೀಪಾ ಜಿಗಳೂರ, ಸಹೋದರರು, ಅಪಾರ ಬಂಧು-ಬಳಗ ಇದ್ದಾರೆ. ಆ. 19 (ಶನಿವಾರ) ಬೆಳಗ್ಗೆ 12 ಗಂಟೆಗೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಕನ್ನಳ್ಳಿಯ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.

ಡಾ॥ವಿಜಯ ಸಂಕೇಶ್ವರ ತೀವ್ರ ಸಂತಾಪ

ಖ್ಯಾತ ಉದ್ಯಮಿ ಡಾ. ಬಸವರಾಜ ಜಿಗಳೂರ ಅವರ ನಿಧನಕ್ಕೆ ವಿಆರ್‌ಎಲ್ ಸಮೂಹ ಸಂಸ್ಥೆಯ ಚೇರ್ಮನ್ ಡಾ. ವಿಜಯ ಸಂಕೇಶ್ವರ ಮತ್ತು ಎಂಡಿ ಆನಂದ ಸಂಕೇಶ್ವರ ಹಾಗೂ ಸಂಕೇಶ್ವರ ಪರಿವಾರದ ಸದಸ್ಯರೆಲ್ಲರೂ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಶ್ರೀಯುತರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

ರಂಭಾಪುರಿ ಜಗದ್ಗುರುಗಳ ಸಂತಾಪ :
ಬೆಂಗಳೂರಿನ ಅನುಭವ ಪ್ರಿಂಟರ್ಸ್ ಮೂಲಕ ಅದ್ಭುತ ಸಾಧನೆ ಮಾಡಿದ್ದ ಸರಳ, ಸ್ನೇಹಜೀವಿ ಡಾ. ಬಸವರಾಜ ಜಿಗಳೂರ ಅವರ ನಿಧನ ತೀವ್ರ ದುಃಖತಂದಿದೆ. ಶ್ರೀಯುತರು ಸಾಮಾಜಿಕ, ಧಾರ್ಮಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರ ಅಗಲಿಕೆಯಿಂದ ನಿಷ್ಠಾವಂತ ಪೀಠಾಭಿಮಾನಿಯನ್ನು ಕಳೆದುಕೊಂಡಂತಾಗಿದೆ. ಮಹಾಪೀಠದ ಬಹುತೇಕ ಮುದ್ರಣ ಕಾರ್ಯದ ಜವಾಬ್ದಾರಿಯನ್ನು ಅವರೇ ನಿರ್ವಹಿಸಿಕೊಂಡು ಬರುತ್ತಿದ್ದರು.ರಂಭಾಪುರಿ ಬೆಳಗು ಮಾಸಪತ್ರಿಕೆ ಮುದ್ರಣದ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಅವರ ಅಗಲಿಕೆಗೆ ಶ್ರೀ ಜಗದ್ಗುರು ರೇಣುಕಾಚಾದಿ ಪಂಚಾಚಾರ್ಯರು ಹಾಗೂ ಶ್ರೀ ಕ್ಷೇತ್ರನಾಥ ವೀರಭದ್ರಸ್ವಾಮಿ ಚಿರಶಾಂತಿಯಿತ್ತು, ಕುಟುಂಬದ ಸದಸ್ಯರಿಗೆ ದುಃಖ ಸಹಿಸಿಕೊಳ್ಳುವ ಶಕ್ತಿಯನ್ನು ಅನುಗ್ರಹಿಸಲಿ ಎಂದು ಶ್ರೀಮದ್ ರಂಭಾಪುರಿ ಜಗದ್ಗುರುಗಳು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.