ಮಂಗಳೂರು: ತೆಂಕುತಿಟ್ಟು ಯಕ್ಷಗಾನ ರಂಗದ ಪ್ರಖ್ಯಾತ ಹಿರಿಯ ಭಾಗವತ ದಿನೇಶ್ ಅಮ್ಮಣ್ಣಾಯ(65) ಅಲ್ಪಕಾಲದ ಅಸೌಖ್ಯದಿಂದ ಬೆಳ್ತಂಗಡಿ ತಾಲೂಕಿನ ಕನ್ಯಾಡಿಯಲ್ಲಿರುವ ಪುತ್ರಿಯ ಮನೆಯಲ್ಲಿ ಗುರುವಾರ ನಿಧನರಾದರು. ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಅರಸಿನಮಕ್ಕಿಯ ಹೊಸ್ತೋಟ ಪಾಳ್ಯದ ನಿವಾಸಿಯಾಗಿದ್ದ ಅವರು ಕರ್ನಾಟಕ ಮೇಳ, ಎಡನೀರು ಮೇಳ, ಕದ್ರಿ ಮೇಳ ಹೀಗೆ ಹಲವಾರು ತೆಂಕುತಿಟ್ಟಿನ ಮೇಳಗಳಲ್ಲಿ ಭಾಗವತರಾಗಿ ಜನಪ್ರಿಯರಾಗಿದ್ದರು. ಭಾವಪ್ರಧಾನ ಪ್ರಸಂಗಗಳ ಗಾಯನಕ್ಕೆ ಹೆಸರುವಾಸಿಯಾಗಿದ್ದರು. ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದರು.
ತನ್ನದೇ ಆದ ಭಾವಪ್ರಧಾನ ಗಾಯನ ಶೈಲಿಯಿಂದ ಕರಾವಳಿಯ ಯಕ್ಷಗಾನಪ್ರಿಯರ ಮನೆಮಾತಾಗಿದ್ದರು. ಕಂಚಿನ ಕಂಠ ಹಾಗೂ ವಿಶಿಷ್ಟ ರಾಗ ಸಂಯೋಜನೆ ಮೂಲಕ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕಲಾ ಸೇವೆಯಲ್ಲಿ ತೊಡಗಿಸಿದ್ದ ದಿನೇಶ್ ಅಮ್ಮಣ್ಣಾಯರು ಪೌರಾಣಿಕ ಮತ್ತು ತುಳು ಸಾಮಾಜಿಕ ಪ್ರಸಂಗಗಳಲ್ಲಿ ತಮ್ಮದೇ ಛಾಪು ಮೂಡಿಸಿ, ಅಮ್ಮಣ್ಣಾಯ ಶೈಲಿಯನ್ನು ಹುಟ್ಟುಹಾಕಿದ್ದರು. ಆ ಕಾಲದ ಪ್ರಸಿದ್ಧ ಡೇರೆ ಮೇಳವಾಗಿದ್ದ ಕರ್ನಾಟಕ ಮೇಳದಲ್ಲಿ ದಿಗ್ಗಜ ಕಲಾವಿದರನ್ನು ರಂಗದಲ್ಲಿ ಕುಣಿಸಿದ ಕೀರ್ತಿ ಅಮ್ಮಣ್ಣಾಯರದ್ದು. ತುಳು ಪ್ರಸಂಗಗಳಿಗೆ ತನ್ನ ಕಂಠ ಮಾಧುರ್ಯದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಅತ್ಯದ್ಭುತ ರಾಗ ಸಂಚಾರದ ಮೂಲಕ ಕರುಣಾ ರಸದ ಪದ್ಯಗಳಿಗೆ ಸಾಟಿಯಿಲ್ಲದ ಭಾಗವತ ಎನಿಸಿಕೊಂಡಿದ್ದರು. ಎಡನೀರು ಸಹಿತ ತೆಂಕುತಿಟ್ಟಿನ ಪ್ರಖ್ಯಾತ ಮೇಳಗಳಲ್ಲಿ ತಿರುಗಾಟ ನಡೆಸಿದ್ದರು. ಪ್ರಸ್ತುತ ವಿಶ್ರಾಂತ ಜೀವನ ನಡೆಸುತ್ತಿದ್ದ ಅಮ್ಮಣ್ಣಾಯರು ಅತಿಥಿ ಭಾಗವತರಾಗಿ ಅನೇಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.
ತೆಂಕುತಿಟ್ಟು ಯಕ್ಷಗಾನ ಪರಂಪರೆಯಲ್ಲಿ ತುಳು ಯಕ್ಷಗಾನವನ್ನು ಉತ್ತುಂಗಕ್ಕೇರಿಸಿದ ದಾಮೋದರ ಮಂಡೆಚ್ಚ ಅವರ ಗರಡಿಯಲ್ಲಿ ಪಳಗಿದ ದಿನೇಶ್ ಅಮ್ಮಣ್ಣಾಯರು ಪುತ್ತೂರು ಮೇಳದಲ್ಲಿ ಚೆಂಡೆ ಮತ್ತು ಮದ್ದಳೆ ವಾದಕರಾಗಿ ವೃತ್ತಿ ಜೀವನ ಆರಂಭಿಸಿದ್ದು ವಿಶೇಷ. ಬಳಿಕ ತನ್ನ ಕಂಚಿನ ಕಂಠದಿಂದಾಗಿ ದಾಮೋದರ ಮಂಡೆಚ್ಚ ಅವರ ತರಬೇತಿಯಲ್ಲಿ ಭಾಗವತಿಕೆಯತ್ತ ಹೊರಳಿದ್ದರು. 90ರ ದಶಕದಲ್ಲಿ ತುಳು ಯಕ್ಷಗಾನದಲ್ಲಿ ಅಮ್ಮಣ್ಣಾಯರ ಭಾಗವತಿಕೆ ಜನಮನ ಸೆಳೆದು ಚಿರಸ್ಥಾಯಿ ಎಂಬಂತಾಗಿತ್ತು.