ಕಿಕ್ಕೇರಿ ಹೋಬಳಿ ಸಾಸಲು ಕ್ಷೇತ್ರದಲ್ಲಿರುವ ಶ್ರೀ ಸೋಮೇಶ್ವರ, ಶ್ರೀ ಶಂಭುಲಿಂಗೇಶ್ವರ ದೇಗುಲ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದು. 
ಜಿಲ್ಲೆ

ಪೂರ್ಣವಾಗದ ದೇಗುಲಗಳ ಜೀರ್ಣೋದ್ಧಾರ

ಮಾದೇಶ್ ತಿ.ನರಸೀಪುರ

ಕಿಕ್ಕೇರಿ: ಶಕ್ತಿ, ಭಕ್ತಿಯ ತಾಣ ಸಾಸಲು ಕ್ಷೇತ್ರದ ಶ್ರೀ ಸೋಮೇಶ್ವರ, ಶ್ರೀ ಶಂಭುಲಿಂಗೇಶ್ವರ ದೇವಾಲಯ ಜೀರ್ಣೋದ್ಧಾರ ಕಾಮಗಾರಿ ಆಮೆವೇಗದಲ್ಲಿ ಸಾಗಿದೆ.

ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ದೇಗುಲಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಶಿಥಿಲಾವಸ್ಥೆ ತಲುಪಿತ್ತು. ಅಪಾರ ಭಕ್ತರ ಮನವಿಗೆ ಸ್ಪಂದಿಸಿದ ಮುಜರಾಯಿ ಇಲಾಖೆ ದೇಗುಲ ಜೀರ್ಣೋದ್ಧಾರ ಕಾಮಗಾರಿಗೆ ಮುಂದಾಗಿ ದೇಗುಲವನ್ನು ಕೆಡವಲಾಯಿತು. 3 ವರ್ಷಗಳ ಹಿಂದೆ 2 ದೇಗುಲಗಳ ಜೀರ್ಣೋದ್ಧಾರ ಕಾಮಗಾರಿಗೆ ತಲಾ 1ಕೋಟಿ ರೂ.ಅಂದಾಜು ವೆಚ್ಚದಲ್ಲಿ 2 ಕೋಟಿ ರೂ.ನಲ್ಲಿ ಕಾಮಗಾರಿ ಆರಂಭಿಸಲಾಯಿತು.

ಆರಂಭದಲ್ಲಿ ಶರವೇಗದಲ್ಲಿ ಸಾಗುತ್ತಿದ್ದ ಕಾಮಗಾರಿ ಇದೀಗ ಮಂದಗತಿಯಲ್ಲಿ ಸಾಗಿದೆ. ಮೂಲಮೂರ್ತಿಗಳನ್ನು ಸ್ಥಳಾಂತರಿಸಿರುವುದರಿಂದ ಭಕ್ತರಿಗೆ ಮೂಲ ದೇಗುಲದಲ್ಲಿ ದೇವರ ದರ್ಶನ ಪಡೆಯಲು ಸಾಧ್ಯವಾಗದಂತಾಗಿದೆ. ಬಳಿಕ ಅರ್ಚಕರು ಮೂಲದೇವರ ದರ್ಶನಕ್ಕೆ ಬಾಲ ಆಲಯವನ್ನು ಭಕ್ತರ ಸಹಕಾರದಲ್ಲಿ ನಿರ್ಮಿಸಲಾಯಿತು. ಮೂಲ ದೇಗುಲದ ಈಶಾನ್ಯ ಭಾಗದಲ್ಲಿ ಮೂಲ ಮೂರ್ತಿ ದೇವರ ದರ್ಶನ ಪಡೆಯುವಂತಾಗಿದೆ.

ಬಹುತೇಕ ಕಲ್ಲಿನಿಂದ ದೇಗುಲ ನಿರ್ಮಾಣವಾಗುತ್ತಿದ್ದು, ಒಂದು ವರ್ಷದಲ್ಲಿ ಮುಗಿಯಲಿದೆ. ದೇವರ ದರ್ಶನಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಮುಜರಾಯಿ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಮೂರು ವರ್ಷವಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಭಕ್ತರು ತಂಗುವ ಕೊಠಡಿ, ಬಟ್ಟೆ ಬದಲಾಯಿಸಿಕೊಳ್ಳಲು ಇದ್ದ ಕೊಠಡಿಗಳು ಇದೀಗ ಇಲ್ಲವಾಗಿದೆ.

ಕಾರ್ತಿಕ ಮಾಸದಲ್ಲಿ ಜಾತಿ, ಮತ, ಪಂಥವಿಲ್ಲದೆ ಲಕ್ಷಾಂತರ ಭಕ್ತರು ವಿವಿಧೆಡೆಯಿಂದ ದೇವರ ದರ್ಶನಕ್ಕೆ ಬರುತ್ತಾರೆ. ಆದರೆ, ಕಾಮಗಾರಿ ಪೂರ್ಣಗೊಳ್ಳದ ಕಾರಣ ಸಮಸ್ಯೆಯಾಗಲಿದೆ.

ಬಟ್ಟೆ ಬದಲಾಯಿಸಿಕೊಳ್ಳಲು ಪರದಾಟ ಬಯಲುಸೀಮೆಯ ಕುಕ್ಕೆ ಸುಬ್ರಹ್ಮಣ್ಯ ಎಂದೇ ಪ್ರಖ್ಯಾತಿ ಹೊಂದಿರುವ ಇಲ್ಲಿನ ಪವಿತ್ರ ಶ್ರೀ ಸೋಮೇಶ್ವರ ಪುಷ್ಕರಿಣಿಯಲ್ಲಿ ಭಕ್ತರು ಸ್ನಾನ ಮಾಡಿ ದೇಗುಲದಲ್ಲಿ ನೀಡುವ ಪ್ರಸಾದ, ನಾಗಬನದ ಮೃತ್ತಿಕೆ ಹಚ್ಚಿಕೊಂಡರೆ ರೋಗರುಜಿನ ದೂರವಾಗಲಿದೆ ಎಂಬ ಪ್ರತೀತಿ ಇದೆ. ಈ ನಂಬುಗೆಯಲ್ಲಿ ಭಕ್ತರು ಪುಷ್ಕರಿಣಿಯಲ್ಲಿ ಪವಿತ್ರ ಸ್ನಾನ ಮಾಡಲು ಬರುವುದು ವಿಶೇಷ. ದೇವರ ದರ್ಶನ ನಂತರ ಬಟ್ಟೆ ಬದಲಾಯಿಸಿಕೊಳ್ಳಲು ಸಮಸ್ಯೆಯಾಗುತ್ತಿದೆ. ದೂರದ ಪ್ರದೇಶದಿಂದ ಬರುವ ಭಕ್ತರಿಗೆ ತಂಗಲು ಕೊಠಡಿ ಇಲ್ಲದಿರುವುದರಿಂದ ಬಯಲಿನಲ್ಲಿ ಮಲಗುವಂತಾಗಿದೆ. ತ್ವರಿತವಾಗಿ ದೇಗುಲ ಕಾಮಗಾರಿ ಮುಗಿಯದೆ ದೇಗುಲದ ಹುಂಡಿಗೆ ಭದ್ರತೆ ಇಲ್ಲವಾಗಿದೆ. ಹಲವು ಬಾರಿ ಕಳ್ಳತನ ಆಗಿದೆ. ಬಾಲ ಆಲಯ ಕಿಷ್ಕಿಂಧೆಯಂತಿದ್ದು ದೇವರ ದರ್ಶನ ಪಡೆಯಲು ಭಕ್ತರಿಗೂ ಸಮಸ್ಯೆಯಾಗಿದೆ. ದೀಪಾವಳಿ ಮರುದಿನದಿಂದ ಕಾರ್ತಿಕ ಮಾಸ ಆರಂಭವಾಗಲಿದೆ. ತಿಂಗಳುಗಟ್ಟಲೆ ದೊಡ್ಡ ಜಾತ್ರೆ ಕ್ಷೇತ್ರದಲ್ಲಿ ನಡೆಯಲಿದೆ. ಸಹಸ್ರಾರು ಭಕ್ತರು ರಾಜ್ಯದ ವಿವಿಧ ಮೂಲೆಯಿಂದ ಬರುತ್ತಾರೆ. ಆದ್ದರಿಂದ ಮುಜರಾಯಿ ಇಲಾಖೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಕುಂಟುತ್ತ ಸಾಗಿರುವ ಕಾಮಗಾರಿಯನ್ನು ವೇಗವಾಗಿ ನಡೆಯಲು ಕ್ರಮ ಕೈಗೊಳ್ಳುವ ಮೂಲಕ ಭಕ್ತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.

ಬಯಲುಸೀಮೆಯ ಕುಕ್ಕೆ ಸುಬ್ರಹ್ಮಣ್ಯ ಎಂದೇ ಖ್ಯಾತಿ ಪಡೆದಿರುವ ಸಾಸಲು ಕ್ಷೇತ್ರಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಶಿಥಿಲವಾಗಿದ್ದ ದೇಗುಲವನ್ನು ಕೆಡವಲಾಗಿದೆ. 1 ವರ್ಷದಲ್ಲಿ ಮುಗಿಯುವ ಕಾಮಗಾರಿ 3 ವರ್ಷವಾದರೂ ಪೂರ್ಣವಾಗಿಲ್ಲ. ದೂರದಿಂದ ಆಗಮಿಸುವ ಭಕ್ತರಿಗೆ ತಂಗಲು ಸೂಕ್ತ ಸ್ಥಳವಿಲ್ಲದೆ ಬಯಲಿನಲ್ಲಿ ಮಲಗುವಂತಾಗಿದೆ. ಸ್ನಾನ ಮಾಡಿ ಒದ್ದೆ ಬಟ್ಟೆಯಲ್ಲಿ ಹರಕೆ ಒತ್ತು ದೇವರ ದರ್ಶನ ಪಡೆಯುತ್ತಿದ್ದ ಭಕ್ತರಿಗೆ ಬಟ್ಟೆ ಬದಲಾಯಿಸಿಕೊಳ್ಳಲು ಸೂಕ್ತ ಕೊಠಡಿ, ಸ್ಥಳ ಇಲ್ಲವಾಗಿದೆ. ಬಯಲಿನಲ್ಲಿಯೇ ಹೆಣ್ಣು ಮಕ್ಕಳು ಬಟ್ಟೆ ಬದಲಾಯಿಸಿಕೊಳ್ಳುವ ಪರಿಸ್ಥಿತಿ ಇದೆ. ಅಧಿಕಾರಿಗಳು ಕಾಮಗಾರಿ ಶೀಘ್ರ ಪೂರ್ಣವಾಗಲು ಕ್ರಮ ಕೈಗೊಳ್ಳುವ ಮೂಲಕ ಭಕ್ತರ ದರ್ಶನಕ್ಕೆ ಅನುಕೂಲ ಮಾಡಿಕೊಡಬೇಕು. ಗುರುಮೂರ್ತಿ ಭಕ್ತ ಶಿಥಿಲಾವಸ್ಥೆಯಲ್ಲಿದ್ದ ಶ್ರೀ ಸೋಮೇಶ್ವರ, ಶಂಭುಲಿಂಗೇಶ್ವರ ದೇವಾಲಯ ಸುರಕ್ಷತೆ ದೃಷ್ಟಿಯಿಂದ ಜೀರ್ಣೋದ್ಧಾರ ಮಾಡಲಾಗುತ್ತಿದೆ. ಗುತ್ತಿಗೆದಾರರಿಗೆ ಒಂದು ವರ್ಷದಲ್ಲಿ ಕಾಮಗಾರಿ ಮುಗಿಸಿಕೊಡಲು ತಿಳಿಸಲಾಗಿತ್ತು. ಕಾಮಗಾರಿ ವಿಳಂಬವಾಗುತ್ತಿರುವುದಕ್ಕೆ ಈಗಾಗಲೇ ತಿಳಿಸಲಾಗಿದೆ. ಭಕ್ತರಿಗೆ ಕಾರ್ತಿಕ ಮಾಸ ಜಾತ್ರೆಯಲ್ಲಿ ಮೂಲಸೌಲಭ್ಯ ಕಲ್ಪಿಸಲು ವ್ಯವಸ್ಥೆ ಮಾಡಲಾಗುವುದು. ಅಶೋಕ್ ಮುಜರಾಯಿ ಇಲಾಖೆ ಅಧಿಕಾರಿ, ಕೆ.ಆರ್. ಪೇಟೆ