ಜಿಲ್ಲೆ

ವೈಯಕ್ತಿಕ ಹಿತಾಸಕ್ತಿಗೆ ಜಿಲ್ಲೆಗೆ ಮರುನಾಮಕರಣ!

ರಾಮನಗರ

ಜಿಲ್ಲೆಯ ಹೆಸರು ಬದಲಾವಣೆ ಮಾಡಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನೀಡಿರುವ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರಸ್ಕರಿಸಬೇಕು, ಇಲ್ಲದಿದ್ದರೆ ಉಗ್ರಹೋರಾಟ ನಡೆಸಬೇಕಾಗುತ್ತದೆ ಎಂದು ರೇಷ್ಮೆ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಗೌತಮ್‌ಗೌಡ ಎಚ್ಚರಿಸಿದರು.

ರಾಮನಗರದ ರಾಯರದೊಡ್ಡಿಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ಸಿಗರಿಗೆ ಶ್ರೀರಾಮನ ಹೆಸರು ಕೇಳಿ 10 ವರ್ಷದಿಂದ ಭಾರಿ ಸಂಕಟವಾದಂತಿದೆ. ಒಂದು ವರ್ಗದವರ ಸಂತೃಪ್ತಿಗೊಸ್ಕರ ಹೆಸರು ಬದಲಾವಣೆಗೆ ಕಾಂಗ್ರೆಸ್ ನಾಯಕರು ಹೊರಟಿದಂತಿದೆ. ಇದಕ್ಕೆ ಮುಖ್ಯಮಂತ್ರಿಗಳು ಅವಕಾಶ ನೀಡಬಾರದು ಎಂದರು.

ರಾಮನಗರ ಶ್ರೀರಾಮ ಪಾದಸ್ಪಶರ್ ಮಾಡಿದ ಪುಣ್ಯಭೂಮಿ. ಪುರಾಣದನಂಟಿರುವ ಜಿಲ್ಲೆಯ ಹೆಸರು ಬದಲಾವಣೆಗೂ ಮುನ್ನ ಸರ್ವ ಪಕ್ಷದ ಮುಖಂಡರ ನೇತೃತ್ವದಲ್ಲಿ ಚರ್ಚೆಯಾಗಿಲ್ಲ. ಜತೆಗೆ, ಹೆಸರು ಬದಲಾವಣೆ ಕುರಿತು ಜನಾಭಿಪ್ರಾಯ ಸಂಗ್ರಹಿಸಿಲ್ಲ. ರಿಯಲ್ ಎಸ್ಟೇಟ್ ಹಾಗೂ ವೈಯಕ್ತಿಕ ಹಿತಾಸಕ್ತಿಗಾಗಿ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಡಿ.ಕೆ.ಶಿವಕುಮಾರ್ ಹೊರಟಿದ್ದಾರೆ.

ಹೆಸರು ಬದಲಾವಣೆಯಿಂದ ಜಿಲ್ಲೆ ಅಭಿವೃದ್ಧಿಯಾಗುವುದಾದರೆ ರಾಜ್ಯದ ಇತರ ಜಿಲ್ಲೆಗಳಿಗೂ ಬೆಂಗಳೂರು 1,2,3,4 ಎಂದು ಮರುನಾಮಕರಣ ಮಾಡಲಿ ಎಂದರು. ಈ ಹಿಂದೆ ಬಿಜೆಪಿ ಆಡಳಿತ ನಡೆಸುವ ಸಮಯದಲ್ಲಿ ಬಿಜೆಪಿ ಶಾಸಕರು ರಾಮನಗರವನ್ನು ನವಬೆಂಗಳೂರು ಎಂದು ಘೋಷಣೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದರು.

ಆದರೆ, ಇದಕ್ಕೆ ಜನರಿಂದ ವಿರೋಧ ಬಂದ ಹಿನ್ನೆಲೆಯಲ್ಲಿ ಈ ವಿಷಯವನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು ಎಂದರು. ಮುಖಂಡರಾದ ರಾಘವೇಂದ್ರ, ಹೇಮಾವತಿ, ಚನ್ನಪ್ಪ, ಬಸವರಾಜು, ದೇವರಾಜು, ಜೆಡಿಎಸ್ ಮುಖಂಡ ಕೆಂಪರಾಜು ಇದ್ದರು.

ವೈಯಕ್ತಿಕ ಆಸ್ತಿಗಳಮೌಲ್ಯ ಹೆಚ್ಚಿಸಿಕೊಳ್ಳಲು ತಂತ್ರ

ಬಗರ್ ಹುಕುಂ ಸಮಿತಿಗೆ ಸಾಮಾನ್ಯವಾಗಿ ಸ್ಥಳೀಯ ಶಾಸಕರು ಅಧ್ಯಕ್ಷರಾಗಿರುತ್ತಾರೆ. ಆದರೆ, ಕನಕಪುರದಲ್ಲಿ ಮಾತ್ರ ಬದಲಾಗಿದ್ದು, ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಬಗರ್ ಹುಕುಂ ಸಮಿತಿಗೆ ಅಧ್ಯಕ್ಷರಾಗಿದ್ದಾರೆ. ಇವರ ವೈಯಕ್ತಿಕ ಆಸ್ತಿಗಳ ಮೌಲ್ಯ ಹೆಚ್ಚಿಸಿಕೊಳ್ಳಲು ಹೆಸರು ಬದಲಾವಣೆ ತಂತ್ರ ಮಾಡಿದ್ದಾರೆ ಎಂದು ಗೌತಮ್‌ಗೌಡ ಛಾಟಿ ಬೀಸಿದರು.