ಲಿಂಗಸುಗೂರು ಎಸಿ ಬಸವಣೆಪ್ಪ ಕಲಶೆಟ್ಟಿಗೆ ರಾಜ್ಯ ರೈತ ಸಂಘದ ಮುಖಂಡರು ಮನವಿ ಸಲ್ಲಿಸಿದರು. ರೈತಸಂಘದ ಜಿಲ್ಲಾಧ್ಯಕ್ಷ ಶಿವಪುತ್ರಗೌಡ, ರಾಜ್ಯ ಸದಸ್ಯ ಬಸವರಾಜ ಗೋಡಿಹಾಳ, ತಾಲೂಕು ಅಧ್ಯಕ್ಷ ಪ್ರಸಾದರಡ್ಡಿ, ಪ್ರಮುಖರಾದ ಬಸವರಾಜ, ಅಮರೇಶ, ಮಹ್ಮದ್ ಸಾಬ, ರಂಗಪ್ಪ, ನಾಗಪ್ಪ ಹನುಮಂತ ಇದ್ದರು. 
ಜಿಲ್ಲೆ

ಪಹಣಿ ಪತ್ರಿಕೆಗಳಲ್ಲಿ ವಕ್ಫ್ ಹೆಸರು ತೆಗೆದು ಹಾಕಿ

ರುದ್ರಪ್ಪ ವಾಲಿ

ಲಿಂಗಸುಗೂರು: ತಾಲೂಕಿನ ರೈತರ ಜಮೀನುಗಳ ಪಹಣಿ ಪತ್ರಿಕೆಗಳ ಕಾಲಂ ನಂ.11 ರಲ್ಲಿ ವಕ್ಫ್ ಬೋರ್ಡ್ ಎಂದು ನಮೂದಾಗಿರುವ ಲೋಪ ಸರಿಪಡಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕರುನಾಡ ವಿಜಯಸೇನೆ ಮುಖಂಡರು ಎಸಿ ಬಸವಣೆಪ್ಪ ಕಲಶೆಟ್ಟಿಗೆ ಸೋಮವಾರ ಪ್ರತ್ಯೇಕ ಮನವಿ ಸಲ್ಲಿಸಿದರು.

ರಾಜ್ಯ ಸರ್ಕಾರ 1,974 ರ ಗೆಜೆಟೀಯರ್ ಹಾಗೂ 2,010 ರಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಹೊರಡಿಸಿದ ಸುತ್ತೋಲೆ ಆಧರಿಸಿ ರಾಯಚೂರು ಜಿಲ್ಲೆ ಸೇರಿ ಕಲ್ಯಾಣ ಕರ್ನಾಟಕದ ಕೆಲ ರೈತರ ಪಹಣಿ ಪತ್ರಿಕೆಗಳಲ್ಲಿ ವಕ್ಫ್ ಹೆಸರು ಸೇರ್ಪಡೆ ರೈತರಿಗೆ ಮಾರಕವಾಗಿ ಪರಿಣಮಿಸಿದೆ. 2017-18 ಮತ್ತು 2023-24 ರಲ್ಲಿ ಸರ್ಕಾರ ಯಾವುದೇ ಮಾಹಿತಿ ನೀಡದೆ ರೈತರ ಕೃಷಿ ಭೂಮಿಯ ಪಹಣಿಯಲ್ಲಿ ಕಂದಾಯ ದಾಖಲೆಗಳ ಕಲಂ 09 ಮತ್ತು 11 ರಲ್ಲಿ ವಕ್ಫ್ ಬೋರ್ಡ್ ಎಂದು ತಿದ್ದುಪಡಿ ಮಾಡಿರುವುದು ರೈತರ ಮೇಲಿನ ದೌರ್ಜನ್ಯವಾಗಿದೆ.

ದಾಖಲೆಗಳನ್ನು ತಿದ್ದಲು ಸ್ಪಷ್ಟ ಅಗತ್ಯ ದಾಖಲೆಗಳಿರಬೇಕೆಂಬ ಸುಪ್ರಿಂ ಕೋರ್ಟ್ ನಿರ್ದೇಶನವಿದೆ. ಸರ್ಕಾರ ಭೂ ಕಂದಾಯ ಕಾಯ್ದೆ, ಭೂ ನ್ಯಾಯಾಧಿಕರಣ ಉಳುವವನೇ ಒಡೆಯ ಕಾಯ್ದೆಯಡಿ ಮಾಲೀಕತ್ವ ಪಡೆದು ಉಳಿಮೆ ಮಾಡುತ್ತಿದ್ದು, ಏಕಾಏಕಿ ಕಾಯ್ದೆ ನಿಯಮ ಉಲ್ಲಂಘಿಸಿರುವುದು ರೈತರಿಗೆ ಮರಣ ಶಾಸನವಾಗಿದೆ. ಸಿಎಂ ಸಿದ್ಧರಾಮಯ್ಯ ಅವರು ಭೂ ಸುಧಾರಣಾ ಕಾಯ್ದೆಯಿಂದ ರೈತರನ್ನು ಭೂಮಿಯಿಂದ ಹೊರ ಹಾಕಲು ಅನುಷ್ಠಾನಕ್ಕೆ ತಂದಿರುವ ಕಾಯ್ದೆಯನ್ನು ತಕ್ಷಣ ರದ್ದುಗೊಳಿಸಿ ರೈತರನ್ನು ರಕ್ಷಿಸಬೇಕು ಎಂದರು.

ಕರುನಾಡ ವಿಜಯಸೇನೆಯ ತಾಲೂಕು ಅಧ್ಯಕ್ಷ ಹನುಮಂತ ಬಡಿಗೇರ, ಉಪಾಧ್ಯಕ್ಷ ರಂಗಪ್ಪ ಭೋವಿ, ಕಾರ್ಯದರ್ಶಿ ಹನುಮಂತ, ಮಹಾಂತೇಶ, ಪರಶುರಾಮ, ದುರುಗಪ್ಪ, ಮಲ್ಲಪ್ಪ, ಸಂಗನಗೌಡ, ಗೌಡಪ್ಪ, ಶಿವಶಂಕರ, ತಿರುಪತಿ, ಹುಲಗಪ್ಪ, ಜಾಫರ್ ಇತರರಿದ್ದರು.