ಹನೂರು: ನಾಲೆಗಳಲ್ಲಿ ಬೆಳೆದಿರುವ ಗಿಡ-ಗಂಟಿ ಹಾಗೂ ಹೂಳನ್ನು ತೆಗೆಸುವ ಮೂಲಕ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರಾವರಿ ವ್ಯವಸ್ಥೆ ಒದಗಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ಸೂಚಿಸಿದರು.
ತಾಲೂಕಿನ ಅಜ್ಜೀಪುರದ ಬಳಿಯ ಉಡುತೊರೆ ಜಲಾಶಯದ ಮೂಲಕ ನೀರಾವರಿ ವ್ಯವಸ್ಥೆ ಒದಗಿಸಲಾಗಿರುವ ಎಡದಂಡೆ ಹಾಗೂ ಬಲದಂಡೆ ನಾಲೆಗಳಿಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.
ಈ ಭಾಗದಲ್ಲಿ ಬಹುತೇಕ ರೈತರು ಹಲವು ವರ್ಷಗಳಿಂದ ಉಡುತೊರೆ ಜಲಾಶಯದಿಂದ ನೀರಾವರಿ ಸೌಕರ್ಯ ಪಡೆದು ಕೃಷಿ ಮಾಡುತ್ತಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಸಮರ್ಪಕ ನಿರ್ವಹಣೆ ಇಲ್ಲದ ಪರಿಣಾಮ ನಾಲೆಗಳಲ್ಲಿ ಹೂಳು ತುಂಬಿದ್ದು, ಗಿಡ ಗಂಟಿಗಳು ಬೆಳೆದು ನಿಂತಿವೆ. ಇದರಿಂದ ಸರಾಗವಾಗಿ ನೀರು ಹರಿಯಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಜಮೀನುಗಳಿಗೆ ನೀರು ತಲುಪುತ್ತಿಲ್ಲ. ಈ ಬಗ್ಗೆ ರೈತರು ಆಕ್ಷೇಪ ವ್ಯಕ್ತಪಡಿಸಿದ್ದು, ಅನುಕೂಲ ಕಲ್ಪಿಸುವ ಮನವಿ ಮಾಡಿದ್ದಾರೆ. ಆದ್ದರಿಂದ ಜಲಾಶಯದ ಮೂಲಕ ನೀರಾವರಿ ಸಂಪರ್ಕ ಕಲ್ಪಿಸಿರುವ ನಾಲೆಗಳನ್ನು ಪರಿಶೀಲನೆ ನಡೆಸಿ ಮಳೆಗಾಲಕ್ಕೂ ಮೊದಲೇ ಹೂಳು ಹಾಗೂ ಗಿಡಗಂಟಿಗಳನ್ನು ತೆರವುಗೊಳಿಸಬೇಕು. ಸಮರ್ಪಕ ನೀರಾವರಿ ವ್ಯವಸ್ಥೆ ಒದಗಿಸಬೇಕು. ಇನ್ನು ಕೆಲವು ಕಡೆಗಳಲ್ಲಿ ದುರಸ್ತಿಗೊಂಡಿರುವ ನಾಲೆಗಳನ್ನು ರಿಪೇರಿ ಪಡಿಸಬೇಕು, ಅಗತ್ಯವಿದ್ದಲ್ಲಿ ಕ್ರಿಯಾಯೋಜನೆ ತಯಾರಿಸಿ ಅಭಿವೃದ್ಧಿ ಪಡಿಸಬೇಕು. ನೀರಾವರಿ ಸಂಬಂಧ ಯಾವುದೇ ಕಾರಣಕ್ಕೂ ರೈತರಿಗೆ ಸಮಸ್ಯೆಯಾಗಬಾರದು. ಈ ಬಗ್ಗೆ ಅಗತ್ಯ ಮುತುವರ್ಜಿ ವಹಿಸಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಸಲ್ಲದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜನರಿಗೆ ಉದ್ಯೋಗ ನೀಡಲು ಸೂಚನೆ: ಪರಿಶೀಲನೆ ವೇಳೆ ನಾಲೆಗಳಲ್ಲಿ ಗಿಡ ಗಂಟಿಗಳು ಬೆಳೆದಿರುವುದನ್ನು ಮನಗಂಡ ಶಾಸಕರು ಸಂಬಂಧಪಟ್ಟ ಅಧಿಕಾರಿಗೆ ಫೋನಾಯಿಸಿ ನರೇಗಾ ಯೋಜನೆಯಡಿ ಜನರಿಗೆ ಉದ್ಯೋಗ ನೀಡುವುದರ ಮೂಲಕ ನಾಲೆಗಳಲ್ಲಿ ಬೆಳೆದಿರುವ ಗಿಡಗಂಟಿ ಹಾಗೂ ಹೂಳನ್ನು ತೆರೆವುಗೊಳಿಸಬೇಕು. ಇದರಿಂದ ರೈತರಿಗೆ ಹಾಗೂ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಪರಿಹಾರದ ಭರವಸೆ: ಇದೇ ವೇಳೆ ಚಿಗತಾಪುರ ಗ್ರಾಮದ ವೃದ್ಧೆ ಯರಮ್ಮ ಮಾತನಾಡಿ, 15 ವರ್ಷದ ಹಿಂದೆ ಈ ಭಾಗದ ರೈತರ ಜಮೀನಿನ ಸ್ವಲ್ಪ ಭಾಗವನ್ನು ಸ್ವಾಧೀನ ಪಡಿಸಿಕೊಂಡು ನಾಲೆಯನ್ನು ನಿರ್ಮಿಸಲಾಗಿದೆ. ಆದರೆ ಈವರೆಗೂ ಪರಿಹಾರ ಬಂದಿಲ್ಲ. ಆದ್ದರಿಂದ ಈ ಬಗ್ಗೆ ಗಮನಹರಿಸಿ ಅನುಕೂಲ ಕಲ್ಪಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು. ಈ ಸಂಬಂಧ ಶಾಸಕರು ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ದಾಖಲೆಗಳನ್ನು ನೀಡುವಂತೆ ತಿಳಿಸಿದರು. ಅಧಿಕಾರಿಗಳು ಸರ್ಕಾರದಿಂದ ಪರಿಹಾರ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದರು.
ಬಳಿಕ ನೀರಾವರಿ ವ್ಯವಸ್ಥೆ ಸಂಬಂಧ ನಾಲೆಗಳ ನಕಾಶೆಯನ್ನು ಪರಿಶೀಲಿಸಿದ ಶಾಸಕರು ಉಡುತೊರೆ ಜಲಾಶಯಕ್ಕೆ ತೆರಳಿ ವೀಕ್ಷಣೆ ನಡೆಸಿದರು. ಈ ವೇಳೆ ದುರಸ್ತಿ ಇರುವೆಡೆ ರಿಪೇರಿ ಮಾಡುವುದರ ಮೂಲಕ ನೀರು ಪೋಲಾಗದಂತೆ ಕ್ರಮವಹಿಸಬೇಕು ಎಂದು ಸೂಚಿಸಿದರು. ಇನ್ನು ಗುಂಡಾಲ್ ಜಲಾಶಯದ ನಾಲೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಾವೇರಿ ನೀರಾವರಿ ನಿಗಮದ ಎಇಇಗಳಾದ ರಮೇಶ್, ರಾಮಕೃಷ್ಣ, ಕರುಣಾಮಯಿ, ಎಇ ಬಸವೇಶ್, ಮುಖಂಡರಾದ ಚಿನ್ನವೆಂಕಟ, ಮಂಜೇಶ್ ಮತ್ತಿತರರಿದ್ದರು.