ಬೆಂಗಳೂರು: ಬಿಬಿಎಂಪಿ ಮುಖ್ಯ ಆಯುಕ್ತರಾಗಿ ಇತ್ತೀಚಿಗೆ ಅಧಿಕಾರ ವಹಿಸಿಕೊಂಡಿರುವ ಎಂ.ಮಹೇಶ್ವರ್ ರಾವ್ ಅವರು ವಿವಿಧ ವಲಯಗಳಲ್ಲಿ ದಿಢೀರ್ ತಪಾಸಣೆ ಕೈಗೊಂಡು ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಇದರನ್ವಯ ಶುಕ್ರವಾರ ಪೂರ್ವ ವಲಯದ ಆಯುಕ್ತೆ ಎಸ್.ಸ್ನೇಹಲ್ ಅವರು ಇಂದಿರಾನಗರ ಹಾಗೂ ಕೋರಮಂಗಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಾದಚಾರಿ ಮಾರ್ಗ, ರಸ್ತೆ, ಚರಂಡಿ, ಬೀದಿ ದೀಪ ಸೌಲಭ್ಯಗಳನ್ನು ಪರಿಶೀಲಿಸಿದರು.
ಈ ವೇಳೆ ಇಂದಿರಾನಗರದ 100 ಅಡಿ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಹಳೆಯ ಹಾಗೂ ಬಳಕೆಯಲ್ಲಿಲ್ಲದ ವಿದ್ಯುತ್ ಕಂಬಗಳಿದ್ದು, ಅವುಗಳಿಂದ ನಾಗರಿಕರಿಗೆ ಅಡ್ಡಿಯಾಗುತ್ತಿದ್ದ ಬಗ್ಗೆ ದೂರು ಆಲಿಸಲಾಯಿತು. ಇದಕ್ಕೆ ತಕ್ಷಣವೇ ಸ್ಪಂದಿಸಿ ನಿರುಪಯುಕ್ತ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಫುಟ್‌ಪಾತ್ ಸರಿಪಡಿಸಲು ಸೂಚಿಸಿದರು.
ಇಂದಿರಾನಗರದ 12ನೇ ಮುಖ್ಯರಸ್ತೆಯಿಂದ ಗಣಪತಿ ಎನ್‌ಕ್ಲೇವ್ ವರೆಗೆ ಪಾದಚಾರಿ ಮಾರ್ಗ ಪರಿಶೀಲನೆ ನಡೆಸುವ ವೇಳೆ ಮಾತನಾಡಿದ ಅವರು, ಮಳೆಗಾಲದ ವೇಳೆ ಒಳಚರಂಡಿಗಳ ಕವರ್ ಸ್ಲ್ಯಾಬ್ಗಳಿಂದ ನೀರು ಉಕ್ಕಿ ಹರಿಯಲಿದೆ. ಹಾಗಾಗಿ ರಸ್ತೆ ಭಾಗದಲ್ಲಿ ಒಳಚರಂಡಿಗಳ ಮೇಲ್ಭಾಗದಲ್ಲಿ ಅಳವಡಿಸಿರುವ ಕವರ್ ಸ್ಲ್ಯಾಬ್ಗಳನ್ನು ಸರಿಪಡಿಸಿ ಸಮಸ್ಯೆಯನ್ನು ನಿವಾರಿಸಬೇಕು ಎಂದು ನಿರ್ದೇಶಿಸಿದರು.
ಕಟ್ಟಡ ಮಾಲೀಕರಿಗೆ ನೋಟಿಸ್:
ಪಾದಚಾರಿ ಮಾರ್ಗಗಳಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಹಾಕುವಂತಿಲ್ಲ. ಇದರಿಂದ ನಾಗರಿಕರ ಓಡಾಟಕ್ಕೆ ಸಾಕಷ್ಟು ಸಮಸ್ಯೆಯಾಗಲಿದೆ. ಈ ಅಂಶವನ್ನು ಪರಿಗಣಿಸಿ ಸ್ಥಳಿಯ ಇಂಜಿನಿಯರ್‌ಗಳು ವಾರ್ಡ್‌ಗಳ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಸಮಸ್ಯೆಯಾದಲ್ಲಿ ಸಂಬಂಧಿಸಿದ ಬಿಲ್ಡಿಂಗ್ ಮಾಲೀಕರಿಗೆ ನೋಟಿಸ್ ನೀಡಿ ದಂಡ ವಿಧಿಸಬೇಕು ಎಂದು ಸ್ನೇಹಲ್ ಸೂಚಿಸಿದರು.
ತಪಾಸಣೆ ವೇಳೆ ಬಿಬಿಎಂಪಿ ಜಂಟಿ ಆಯುಕ್ತೆ ಸರೋಜ, ಮುಖ್ಯ ಅಭಿಯಂತರ ಸುಗುಣ, ಪೊಲೀಸ್, ಪಾಲಿಕೆ, ಬೆಸ್ಕಾಂ ಹಾಗೂ ಜಲಮಂಡಳಿ ಅಧಿಕಾರಿಗಳು ಹಾಜರಿದ್ದರು.
ಅಧಿಕಾರಿಗಳಿಗೆ ಸೂಚನೆ ಏನು?:
* ಪಾದಚಾರಿ ಮಾರ್ಗ ಒತ್ತುವರಿ ಆಗಿದ್ದಲ್ಲಿ ಅವುಗಳನ್ನು ಗುರುತಿಸಿ ತೆರವುಗೊಳಿಸಬೇಕು
* ರಸ್ತೆಗುಂಡಿಗಳು ಸಂಚಾರಕ್ಕೆ ಅಡಚಣೆಯಾಗುವುದಿದ್ದಲಲಿ ತಕ್ಷಣ ಮುಚ್ಚಬೇಕು
* ರಸ್ತೆಗೆ ಚಾಚಿಕೊಂಡಿರುವ, ಒಣಗಿದ ಅಪಾಯಕಾರಿ ಮರ/ಕೊಂಬೆ ತೆರವುಗೊಳಿಸಬೇಕು
* ಅನಧಿಕೃತ ಕೇಬಲ್, ಅನಧಿಕೃತ ಬ್ಯಾನರ್‌ಗಳ ತೆರವಿಗೆ ಆದ್ಯತೆ ನೀಡಬೇಕು.
ಮೇಲ್ಸೇತುವೆ ಬಳಿ ಸ್ಕೈವಾಕ್‌ಗೆ ಚಿಂತನೆ:
ಇಂದಿರಾನಗರದಿಂದ ಕೋರಮಂಗಲದ ಕಡೆ ಹೋಗುವ ದೊಮ್ಮಲೂರು ಮೇಲ್ಸೇತುವೆಯ ಮೇಲೆ ಪಾದಚಾರಿ ಮಾರ್ಗವಿಲ್ಲದಿರುವುದನ್ನು ಗಮನಿಸಿ, ಇದರಿಂದ ನಾಗರಿಕರ ಓಡಾಟಕ್ಕೆ ಸಮಸ್ಯೆ ಉಂಟಾಗಿದ್ದು, ದೊಮ್ಮಲೂರು ಮೇಲ್ಸೇತುವೆ ಮೇಲೆ ಪಾದಚಾರಿ ಮಾರ್ಗ ನಿರ್ಮಾಣ ಮಾಡುವುದು ಅಥವಾ ಹಳೆಯ ವಿಮಾನ ನಿಲ್ದಾಣದ ರಸ್ತೆಗೆ ಪಾದಚಾರಿ ಮೇಲ್ಸೇತುವೆ (ಸ್ಕೈವಾಕ್) ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲು ಸ್ನೇಹಲ್ ಸೂಚಿಸಿದರು.