ಜಿಲ್ಲೆ

ಜಾತಿಗಳ ಹಿಂದಿನ ಕ್ರೈಸ್ತಪದ ತೆಗೆದುಹಾಕಿ

ವಿಠ್ಠಲ ಹಣಮಂತ ಬಾಳೇಕುಂದ್ರಿ

ಬೆಳಗಾವಿ: ರಾಜ್ಯ ಕಾಂಗ್ರೆಸ್​ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಹಿಂದು ಧರ್ಮದ ಎಲ್ಲ ಜಾತಿಗಳ ಹಿಂದೆ ಕ್ರೈಸ್ತ ಎಂಬ ಪದ ಸೇರ್ಪಡೆ ಮಾಡುವ ಮೂಲಕ ಹುಚ್ಚು ಸಾಹಸಕ್ಕೆ ಕೈಹಾಕಿರುವುದು ಖಂಡನೀಯ. ಕೂಡಲೇ ಈ ಪದ ತೆಗೆದುಹಾಕಬೇಕು ಎಂದು ವಿಧಾನ ಪರಿಷತ್​ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಹಿಂದು ಜನಜಾಗೃತಿ ವೇದಿಕೆ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 46 ಹಿಂದುಳಿದ ಜಾತಿಗಳ ಹಿಂದೆ ಕೆಸ್ತ ಪದ ಸೇರ್ಪಡೆ ಮಾಡುವ ಮೂಲಕ ಸರ್ಕಾರವೇ ಮತಾಂತರ ಮಾಡಲು ಮುಂದಾಗಿದೆ. ಲಿಂಗಾಯತ, ಬ್ರಾಹ್ಮಣ, ದೇವಾಂಗ, ಈಡಿಗ, ಒಕ್ಕಲಿಗ, ಕುರುಬ, ಲಮಾಣಿ, ಮಾದಿಗ ಹೀಗೆ ವಿವಿಧ ಜಾತಿಗಳಲ್ಲಿ ಕೆಸ್ತ ಪದ ಸೇರ್ಪಡೆ ಮಾಡಿದೆ. ಹಿಂದುಳಿದ ವರ್ಗಗಳ ಆಯೋಗ ತಕ್ಷಣ ಇದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ವಕ್ತಾರ ಎಂ.ಬಿ.ಝಿರಲಿ ಮಾತನಾಡಿ, ಡಾ.ಬಿ.ಆರ್​.ಅಂಬೇಡ್ಕರ್​ ನೇತೃತ್ವದಲ್ಲಿ ರಚನೆಗೊಂಡಿರುವ ಸಂವಿಧಾನದ ಪ್ರಕಾರ ಸಾಮಾಜಿಕ ನ್ಯಾಯ ಕೊಡಿಸಲು ಮೀಸಲಾತಿ ಅಗತ್ಯವಾಗಿದೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈ ಮುಂಚಿನ ಕಾಂತರಾಜು ವರದಿ ಸ್ವೀಕರಿಸಲು ಹಿಂದೇಟು ಹಾಕಿದೆ. ಅದನ್ನು ಬಿಟ್ಟು ಸಮಾಜ ಕಲ್ಯಾಣ ಇಲಾಖೆಯಡಿ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸಮೀೆ ನಡೆಸಲಿದೆ. ಸಮೀೆ ನಡೆಸಲು ನಮ್ಮ ವಿರೋಧವಿಲ್ಲ. ಆದರೆ, ಮತಾಂತರ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಗಣತಿ ಹೆಸರಿನಲ್ಲಿ ಸರ್ಕಾರವೇ ಮತಾಂತರ ನಡೆಸುವ ಹುನ್ನಾರ ನಡೆಸಿದೆ ಎಂದು ದೂರಿದರು.

ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಸೆ. 17ರಂದು ನಗರದ ಗಾಂಧಿಭವನದಲ್ಲಿ ಬೆಳಗ್ಗೆ 10.30ಕ್ಕೆ 46 ಜಾತಿಗಳ ಮುಖಂಡರ ಬೃಹತ್​ ಸಭೆ ಆಯೋಜಿಸಲಾಗಿದ್ದು, ಬಳಿಕ ಜಿಲ್ಲಾಧಿಕಾರಿ ಮೂಲಕ ಹಿಂದುಳಿದ ಆಯೋಗ, ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು. ಕೆಸ್ತ ಪದ ಕೈಬಿಡುವವರೆಗೂ ಹೋರಾಟ ನಡೆಯಲಿದೆ ಎಂದು ಹೇಳಿದರು.

ವಿನೋದ ದೊಡ್ಡಣ್ಣವರ, ಈರಣ್ಣ ದಯಾನಂದ, ದಿಗಂಬರ ಪವಾರ, ಮಹಾದೇವ ರಾಠೋಡ, ಸಂದೀಪ ಜೀರಗ್ಯಾಳ, ರೋಹನ್​ ಜವಳಿ, ಹಣಮಂತ ಕೊಂಗಾಲಿ, ರಾಜೇಂದ್ರ ಮುತಗೇಕರ, ಆರ್​.ಎಸ್​.ಮುತಾಲಿಕ್​, ಅನಂತ ಲಾಡ್​, ಚಂದ್ರಶೇಖರ ಸವಡಿ ಇತರರಿದ್ದರು.