ಸಿರಗುಪ್ಪ: ವಿದ್ಯಾರ್ಥಿಗಳು ಕೀಳಿರುಮೆ ಬಿಟ್ಟು ಆತ್ಮ ಸ್ಥೈರ್ಯದಿಂದ ಪ್ರತಿ ದಿನ ಶಿಕ್ಷಕರು ಹೇಳಿದ ಪಾಠವನ್ನು ಓದುವುದು, ಬರೆಯುವುದು ಮಾಡಿದರೆ ಉತ್ತಮ ಅಂಕಗಳಿಸಲು ಸಾಧ್ಯ ಎಂದು ಡಿವೈಎಸ್‌ಪಿ ವೆಂಕಟೇಶ್ ತಿಳಿಸಿದರು.
ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶನಿವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ:ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಎಲ್ಲರೂ ಶ್ರಮವಹಿಸಿ
ಗ್ರಾಮೀಣ ಭಾಗದ ಮಕ್ಕಳು ತಮ್ಮಲ್ಲಿರುವ ನಿರುತ್ಸಾಹ, ಜಿಗುಪ್ಸೆಯನ್ನು ಮನಸ್ಸಿನಿಂದ ತೆಗೆದುಹಾಕಬೇಕು. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಉತ್ತಮ ಶಿಕ್ಷಣದಿಂದ ಮಾತ್ರ ಉನ್ನತ ಸ್ಥಾನ ಪಡೆಯಲು ಸಾಧ್ಯ ಎನ್ನುವುದನ್ನು ಡಾ.ಬಿ.ಆರ್.ಅಂಬೇಡ್ಕರ್ ತೋರಿಸಿಕೊಟ್ಟಿದ್ದಾರೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಓದಿನ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದರು.
ಬಿಇಒ ಎಚ್.ಗುರ‌್ರಪ್ಪ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಮಾತ್ರ ಹೆಚ್ಚಿಗೆ ಓದಿದರೆ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬಹುದೆನ್ನುವ ಆಲೋಚನೆಯನ್ನು ಕೈಬಿಟ್ಟು ನಿರಂತರವಾಗಿ ಓದುವುದರಿಂದ ಉತ್ತಮ ಅಂಕ ಗಳಿಸಬಹುದು ಎಂದರು.
ತಾಪಂಇಒ ಎಂ.ಬಸಪ್ಪ, ಸಂಪನ್ಮೂಲ ವ್ಯಕ್ತಿಗಳಾದ ಎಸ್.ಎಂ.ಹಿರೇಮಠ್, ಅರುಣ್‌ಕುಮಾರ್, ಸಿದ್ದಲಿಂಗಪ್ಪ, ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುವ ಬಗ್ಗೆ ವಿವರವಾದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಬಸವರೆಡ್ಡಿ, ಕಾರ್ಯದರ್ಶಿ ರಾಜೀವ್ ಐರಣಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಬಿ.ರಮೇಶ, ಮುಖ್ಯಶಿಕ್ಷಕ ವೆಂಕಟೇಶ್ ಯಾದವ್, ಕ್ಷೇತ್ರ ಸಂಪನ್ಮೂಲ ಅಧಿಕಾರಿ ದ್ಯಾಮನಗೌಡ, ಪತ್ರಕರ್ತರಾದ ಕೆ.ವೆಂಕಟೇಶ್, ಹುಸೇನಿನಾಯಕ, ಮಾರೆಪ್ಪ ನಾಯಕ, ಸೋಮು, ಮೆಹಬೂಬ್‌ಬಾಷಾ, ರಾಜಸಾಬ್, ಚಾಂದ್‌ಬಾಷಾ ಇತರರಿದ್ದರು.