ಮೈಸೂರು: ನಗರದ ದೇವರಾಜ ಮಾರುಕಟ್ಟೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುವಂತೆ ಮಳಿಗೆಗಳ ಮುಂಭಾಗ ಹೆಚ್ಚುವರಿಯಾಗಿ ಹಾಕಿಕೊಂಡಿದ್ದ ಟಾರ್ಪಾಲ್‌ಗಳನ್ನು ಪಾಲಿಕೆ ಸಿಬ್ಬಂದಿ ಶನಿವಾರ ತೆರವುಗೊಳಿಸಿದರು.
ಪಾಲಿಕೆ ಅಧಿಕಾರಿಗಳು ಸಿಬ್ಬಂದಿ ಸಮೇತ ಮಾರುಕಟ್ಟೆಯ ಒಳಗೆ ನುಗ್ಗಿ ಏಕಾಏಕಿ ವ್ಯಾಪಾರಿಗಳು ತಮ್ಮ ಅಂಗಡಿಗಳ ಮುಂದೆ ಹಾಕಿದ್ದ ಪ್ಲಾಸ್ಟಿಕ್ ಟಾರ್ಪಲ್‌ಗಳನ್ನು ಕಿತ್ತು ಪಾಲಿಕೆ ಲಾರಿಗಳಲ್ಲಿ ತುಂಬಿಕೊಂಡರಲ್ಲದೆ ಇನ್ನು ಮುಂದೆ ಸಂಚಾರಕ್ಕೆ ಅಡ್ಡಿಯಾಗುವಂತೆ ವ್ಯಾಪಾರ ಮಾಡಿದರೆ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು.
ಪಾಲಿಕೆಯ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ವ್ಯಾಪಾರಸ್ಥರು, ಸುಡು ಬಿಸಿಲು ಇರುವ ಕಾರಣ ಸೊಪ್ಪು, ತರಕಾರಿ ಸೇರಿದಂತೆ ಇನ್ನಿತರ ವ್ಯಾಪಾರಿಗಳು ತಮ್ಮ ಅಂಗಡಿಗಳ ಮುಂದೆ ಬಿಸಿಲಿನಿಂದ ರಕ್ಷಿಸಿಕೊಳ್ಳಲು ನೆರಳಿಗಾಗಿ ಹಾಕಿದ್ದ ಟಾರ್ಪಾಲ್‌ಗಳನ್ನು ಏಕಾಏಕಿ ಕಿತ್ತು ಹೊತ್ತೊಯ್ದಿರುವುದು ಖಂಡನೀಯ ಎಂದು ಬಿಸಿಲಿನಿಂದ ಒಣಗಿದ ಸೊಪ್ಪು, ತರಕಾರಿಯನ್ನು ರಸ್ತೆಗೆ ಚೆಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ದೇವರಾಜ ಮಾರುಕಟ್ಟೆ ವ್ಯಾಪಾರಿಗಳ ಸಂಘದ ಪದಾಧಿಕಾರಿ ಇಬ್ರಾಹಿಂ ಮಾತನಾಡಿ, ಬೇಸಿಗೆ ಆಗಿರುವುದರಿಂದ ಸಾಕಷ್ಟು ಬಿಸಿಲು ಹೆಚ್ಚಾಗಿದ್ದು, ಸೊಪ್ಪು ಮತ್ತು ತರಕಾರಿ ಒಣಗಿ ಹೋಗುತ್ತಿವೆ. ಇದರಿಂದ ವ್ಯಾಪಾರ ಮಾಡುವುದು ಕಷ್ಟವಾಗುತ್ತಿದ್ದು, ಬಿಸಿಲಿನಿಂದ ರಕ್ಷಿಸಿಕೊಳ್ಳಲು ಟಾರ್ಪಾಲ್ ಹಾಕಿಕೊಂಡಿದ್ದೇವೆ. ಯಾರಿಗೂ ತೊಂದರೆ ಮಾಡುವ ಉದ್ದೇಶ ನಮ್ಮದಲ್ಲ. ಆದರೂ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು.
ಸಾಲ ಮಾಡಿ ಹೊಟ್ಟೆ ಪಾಡಿಗಾಗಿ ವ್ಯಾಪಾರಕ್ಕೆ ಕುಳಿತಿದ್ದೇವೆ. ಅಂತಹದರಲ್ಲಿ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಮಾರುಕಟ್ಟೆಗೆ ನುಗ್ಗಿ ಟಾರ್ಪಾಲ್ ಕಿತ್ತುಹಾಕುವ ಮೂಲಕ ಪಾಲಿಕೆ ಅಧಿಕಾರಿಗಳು ವ್ಯಾಪಾರಿಗಳಿಗೆ ನಷ್ಟ ಉಂಟುಮಾಡಿದ್ದಾರೆ ಎಂದು ಅಳಲು ತೋಡಿಕೊಂಡರು.
ದೇವರಾಜ ಮಾರುಕಟ್ಟೆಯಲ್ಲಿ ಮೊದಲಿನಂತೆ ವ್ಯಾಪಾರ ನಡೆಯುತ್ತಿಲ್ಲ. ಚಿಕ್ಕ ಗಡಿಯಾರದ ಎದುರು ನೂರಾರು ತಳ್ಳು ಗಾಡಿಗಳನ್ನು ನಿಲ್ಲಿಸಲು ಇದೇ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ. ಇಲ್ಲಿ ಸಿಗುವ ಎಲ್ಲ ತರಕಾರಿಗಳು ಅಲ್ಲಿಯೇ ಸಿಗುವ ಕಾರಣ ವ್ಯಾಪಾರಿಗಳು ಮಾರ್ಕೆಟ್ ಒಳಗೆ ಬರುವುದು ಕಷ್ಟವಾಗಿದೆ. ಇದರಿಂದ ನಮ್ಮ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದರು.
ಮಾರುಕಟ್ಟೆಯಲ್ಲಿ ಸೂಕ್ತ ರಕ್ಷಣೆ ಇಲ್ಲ, ಕಳವು ಹೆಚ್ಚಾಗಿದೆ. ರಾತ್ರಿ ವೇಳೆ ದನಗಳು ಮತ್ತು ಹಸುಗಳ ಕಾಟವಿದೆ. ಅಲ್ಲದೆ ಇಲ್ಲಿನ ಶೌಚಗೃಹ ದುರ್ನಾತ ಬೀರುತ್ತಿದೆ. ಮಾರುಕಟ್ಟೆಯನ್ನು ಈ ಹಿಂದೆ ದಿನಕ್ಕೆ ಮೂರು ಬಾರಿ ಸ್ವಚ್ಛ ಮಾಡುತ್ತಿದ್ದರು. ಈಗ ಒಂದು ಬಾರಿ ಸ್ವಚ್ಛ ಮಾಡುವುದೇ ಕಷ್ಟ. ಕುಡಿಯಲು ನೀರಿಲ್ಲ. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದೆ ನಮ್ಮನ್ನು ಇಲ್ಲಿಂದ ಎತ್ತಂಗಡಿ ಮಾಡಿಸಲು ಮುಂದಾಗಿದ್ದಾರೆ ಎಂದು ವ್ಯಾಪಾರಿಗಳು ಕಿಡಿಕಾರಿದರು.
ಪ್ರಕಾಶ್, ಹುಚ್ಚಪ್ಪ, ಸತ್ಯಪ್ಪ, ಗುರು, ಪ್ಯಾರೂ, ಇಕ್ಬಾಲ್, ಅರುಣ ಇತರರು ಆಕ್ರೋಶ ವ್ಯಕ್ತಪಡಿಸಿದರು.