ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದ ಕೆಲವೊಂದು ಗ್ರಾ.ಪಂ.ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಉಳಿದಂತೆ ಕೆಲವು ಗ್ರಾಪಂ.ಗಳಲ್ಲಿ ಅಷ್ಟೊಂದು ಗಂಭೀರವಾದ ಕುಡಿಯುವ ನೀರಿನ ಸಮಸ್ಯೆ ಈವರೆಗೆ ಕಂಡು ಬಂದಿಲ್ಲ. ಆದರೂ ಸ್ಥಳೀಯಾಡಳಿತ ಮುಂಜಾಗ್ರತೆ ವಹಿಸಬೇಕು. ಮಳೆಗಾಲದಲ್ಲಿ ಅಪಾಯಕಾರಿ ಮರಗಳ ಗೆಲ್ಲು ಕಟಾವು ಮಾಡಲು ಅರಣ್ಯ ಇಲಾಖೆ ಮತ್ತು ಮೆಸ್ಕಾಂ ಸಮನ್ವಯತೆ ಸಾಧಿಸಿ ಕ್ರಮ ಕೈಗೊಳ್ಳಬೇಕೆಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಸೂಚನೆ ನೀಡಿದರು.
ವಿಧಾನಸಭಾ ಕ್ಷೇತ್ರದ ಗ್ರಾಪಂ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆ ಹಾಗೂ ಮಳೆಗಾಲದಲ್ಲಿ ಸಂಭವಿಸುವ ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಕ್ರಮದ ಕುರಿತು ಶಾಸಕರ ಅಧ್ಯಕ್ಷತೆಯಲ್ಲಿ ಕುಂದಾಪುರ ತಾ.ಪಂ. ಸಭಾಂಗಣದಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆಯಿತು.
ಯಾಂಕರ್ ಮೂಲಕ ಪೂರೈಕೆ
ಕೋಟೇಶ್ವರ ಗ್ರಾಪಂ ವ್ಯಾಪ್ತಿಯ 15 ಮನೆಗಳಿಗೆ ಬೋರ್‌ವೆಲ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ಬೋರ್‌ವೆಲ್‌ನಲ್ಲಿ ನೀರು ಬತ್ತಿ ಹೋಗಿದೆ. ಯಾವುದೇ ಖಾಸಗಿ ಜಲಮೂಲ ಇಲ್ಲದಿರುವುದರಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಕೋಟೇಶ್ವರ ಗ್ರಾಪಂ ಪಿಡಿಒ ಹೇಳಿದರು.
ಬೀಜಾಡಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಗ್ರಾಪಂ ಗುಮಾಸ್ತೆ ಹೇಳಿದಾಗ, ನಿಮಗೆ ಈ ಬಗ್ಗೆ ಮಾಹಿತಿ ಇಲ್ಲ, ಪಿಡಿಒ ಅಥವಾ ಅಧ್ಯಕ್ಷರನ್ನು ಕೇಳಿ, ಬೀಜಾಡಿಯಲ್ಲಿ ನೀರಿನ ಸಮಸ್ಯೆ ಇದೆ ಎಂದು ಶಾಸಕರು ಹೇಳಿದರು.
ಕೊರ್ಗಿಯಲ್ಲಿ ಬಾವಿಯಲ್ಲಿ ಕೆಂಪು ನೀರು ಬರುತ್ತಿದೆ. ಎರಡು ದಿನಕ್ಕೊಮ್ಮೆ ಎರಡೆರಡು ಕೊಡಪಾನ ನೀರು ಸಿಗುತ್ತಿದೆ. ನೀರು ಶುದ್ಧೀಕರಿಸಲು ಫಿಲ್ಟರ್ ಅಳವಡಿಸುವಂತೆ ಕೊರ್ಗಿ ಗ್ರಾಪಂ ಅಧಿಕಾರಿ ಹೇಳಿದರು.
ಕುಂದಾಪುರ ತಹಸೀಲ್ದಾರ್ ಪ್ರದೀಪ ಕುರ್ಡೇಕರ್, ಬ್ರಹ್ಮಾವರ ತಹಸೀಲ್ದಾರ್ ಶ್ರೀಕಾಂತ ಹೆಗ್ಡೆ, ಹೆಬ್ರಿ ತಹಸೀಲ್ದಾರ್ ಪ್ರಸಾದ್, ಕುಂದಾಪುರ ತಾಪಂ ಇಒ ಡಾ.ರವಿಕುಮಾರ್ ಹುಕ್ಕೇರಿ, ಬ್ರಹ್ಮಾವರ ತಾಪಂ ಇಒ ಇಬ್ರಾಹಿಂಪುರ, ಉಡುಪಿ ತಾಪಂ ಇಒ ವಿಜಯ್, ನೀರು ಸರಬರಾಜು ಇಲಾಖೆ ಇಂಜಿನಿಯರ್ ಉದಯ ಶೆಟ್ಟಿ, ತಾಲೂಕುಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು, ಪಿಡಿಒಗಳು ಉಪಸ್ಥಿತರಿದ್ದರು.
ಫಿಲ್ಟರ್ ಅಳವಡಿಕೆಗೆ ಮನವಿ
ಗೋಪಾಡಿಯಲ್ಲಿ ಗೇಟ್‌ವಾಲ್‌ನಲ್ಲಿ ನೀರು ಸೋರಿಕೆಯಾಗುತ್ತಿದೆ. ಕುಡಿಯುವ ನೀರು ಪೂರೈಕೆ ಮಾಡುವ ಎರಡು ಪ್ರಮುಖ ಬಾವಿಗಳಲ್ಲಿ ಒಂದು ಬಾವಿಯಲ್ಲಿ ನೀರು ಬತ್ತಿ ಹೋಗಿದೆ. ವಾರಾಹಿ ನೀರು ಬಿಟ್ಟಿರುವುದರಿಂದ ಅಷ್ಟೊಂದು ಸಮಸ್ಯೆ ಇಲ್ಲ ಎಂದು ಗೋಪಾಡಿ ಗ್ರಾಪಂ ಅಧ್ಯಕ್ಷರು ಸಭೆಗೆ ತಿಳಿಸಿದರು. ಗ್ರಾಪಂ.ನ 15ನೇ ಹಣಕಾಸು ಯೋಜನೆಯಡಿ ಉಳಿಕೆ ಹಣ ಕುಡಿಯುವ ನೀರು ಪೂರೈಕೆಗೆ ಬಳಸು ಅನುಮತಿ ನೀಡುವಂತೆ ಮತ್ತು ಶುದ್ಧ ನೀರು ಸರಬರಾಜು ಮಾಡಲು ಫಿಲ್ಟರ್ ಅಳವಡಿಸುವಂತೆ ಮನವಿ ಮಾಡಿದರು.
ತುರ್ತು ಕ್ರಮಕ್ಕೆ ಸೂಚನೆ
ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಪಂಗಳಲ್ಲಿ ಸಮಸ್ಯೆ ಬಗೆಹರಿಸಲು ತುರ್ತು ಕ್ರಮಕೈಗೊಳ್ಳಬೇಕು. ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪಗಳ ಬಗ್ಗೆ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಮೆಸ್ಕಾಂ, ಅರಣ್ಯ ಹಾಗೂ ಇನ್ನಿತರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.