ಜಿಲ್ಲೆ

ವಿದ್ಯಾದಾನದ ಮಹತ್ವ ಅರಿತಿದ್ದ ಗುಬ್ಬಿ ತೋಟದಪ್ಪ: ವೀರಶೈವ ಹಾಸ್ಟೆಲ್ ಟ್ರಸ್ಟಿ ಎಚ್.ಕೆ.ಕೆಂಪಯ್ಯ ಅಭಿಮತ

ಮಂಡ್ಯ: ಧರ್ಮ ಪ್ರವರ್ತಕ ರಾವ್‌ಬಹದ್ದೂರ್ ಗುಬ್ಬಿ ತೋಟದಪ್ಪ ಅವರು ಅನ್ನದಾನಕ್ಕಿಂತ ವಿದ್ಯಾದಾನ ಶ್ರೇಷ್ಟ ಎಂಬ ಮನೋಭಾವ ಹೊಂದಿದ್ದರು ಎಂದು ವೀರಶೈವ ವಿದ್ಯಾರ್ಥಿ ನಿಲಯದ ಟ್ರಸ್ಟಿ ಎಚ್.ಕೆ.ಕೆಂಪಯ್ಯ ಅಭಿಪ್ರಾಯಪಟ್ಟರು.

ನಗರದ ವೀರಶೈವ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದ್ದ ರಾವ್ ಬಹದ್ದೂರ್ ಗುಬ್ಬಿ ತೋಟದಪ್ಪ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತೋಟದಪ್ಪನವರು ಚಿಕ್ಕವಯಸ್ಸಿನಿಂದಲೇ ಅಮರಕೋಶ, ಸೋಮೇಶ್ವರ ಶತಕ, ಶರಣ ಲೀಲಾಮೃತ, ಜೈಮಿನಿ ಭಾರತ ಇವುಗಳೆಲ್ಲವನ್ನು ಅಭ್ಯಾಸ ಮಾಡುತ್ತಿದ್ದರು. ಚಿಕ್ಕವಯಸ್ಸಿನಿಂದಲೇ ವ್ಯಾಪಾರ, ವ್ಯವಹಾರದಲ್ಲಿ ತುಂಬಾ ಆಸಕ್ತಿ ವಹಿಸುತ್ತಿದ್ದರು. ನಂತರ ವಿವಾಹವಾದ ಇವರಿಗೆ ಮಕ್ಕಳಾಗದಿದ್ದಾಗ ಗುರುಗಳಾಗಿದ್ದ ಹಾನಗಲ್ ಕುಮಾರಸ್ವಾಮಿ ಅವರು ಬಡ ಮಕ್ಕಳು ಮತ್ತು ವಿದ್ಯಾರ್ಥಿಗಳೇ ಮುಂದೆ ನಿಮ್ಮ ಮಕ್ಕಳೆಂದು ಭಾವಿಸಿ ಅವರಿಗೆ ಉಚಿತವಾಗಿ ಊಟ ಮತ್ತು ವಸತಿಯನ್ನು ಕಲ್ಪಿಸುವ ಕಾಯಕ ರೂಢಿಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದರು. ಅದರಂತೆ 1905ರಲ್ಲಿಯೇ ಬೆಂಗಳೂರಿನಲ್ಲಿ ಸಂಸ್ಕೃತ ಪಾಠಶಾಲೆ ಸ್ಥಾಪನೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅಲ್ಲಿಯೇ ಧರ್ಮಛತ್ರ ಮತ್ತು ವಿದ್ಯಾರ್ಥಿ ನಿಲಯವನ್ನು ಕಟ್ಟಿಸುತ್ತಾರೆ. ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಉದ್ಘಾಟನೆ ಮಾಡಿಸುತ್ತಾರೆ. 40 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಹಾಸ್ಟಲ್ ಇಂದು ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದರು.

ಗುಬ್ಬಿ ತೋಟದಪ್ಪ ಅವರ ಬೆಂಗಳೂರು ಹಾಸ್ಟೆಲ್‌ನಲ್ಲಿ ಮಾಜಿ ಸಿಎಂ ಎಸ್.ನಿಜಲಿಂಗಪ್ಪ ಹಾಗೂ ತುಮಕೂರಿನ ಸಿದ್ಧಗಂಗಾ ಮಠಾಧ್ಯಕ್ಷ ಡಾ.ಶಿವಕುಮಾರ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ವ್ಯಾಸಂಗ ಮಾಡಿದ್ದಾರೆ. ಇನ್ನು ಅನೇಕರು ಈ ಹಾಸ್ಟೆಲ್‌ನ ಸೌಲಭ್ಯ ಪಡೆದು ರಾಜಕೀಯವಾಗಿ ಹಾಗೂ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಮಹಾನುಭಾವರ ಸೇವೆಯನ್ನು ನೆನೆಯುತ್ತಿರುವುದು ತುಂಬಾ ಒಳ್ಳೆಯ ಕೆಲಸ ಎಂದು ಹೇಳಿದರು.

ವೀರಶೈವ ವಿದ್ಯಾರ್ಥಿ ನಿಲಯದ ಟ್ರಸ್ಟ್ ಅಧ್ಯಕ್ಷ ಎಂ.ಬಿ.ರಾಜಶೇಖರ್, ಕಾರ್ಯದರ್ಶಿ ಎಂ.ಎಸ್.ಶಿವಪ್ರಕಾಶ್, ಕ್ರಾಂತಿಯೋಗಿ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಮೇಶ್, ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ಮಹಾಂತ ದೇವರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಬಿ.ವಿ.ಮಂಜುನಾಥ್, ಬಸವಣ್ಣ ಇತರರಿದ್ದರು. ಸಮಾರಂಭದ ನಂತರ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿತ್ತು.