ಜಿಲ್ಲೆ

ಭಗವಂತನ ಸ್ಮರಣೆ ಜೀವನದ ಅವಿಭಾಜ್ಯ ಅಂಗ

ಉಪ್ಪಳ: ಭಗವಂತನ ಸ್ಮರಣೆ, ವ್ರತ-ನಿಯಮಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಲಿ. ಎಲ್ಲರ ಸತ್​ಚಿಂತನೆಯಿಂದ ಸಾನ್ನಿಧ್ಯ ವೃದ್ಧಿಯಾದ ಕೊಂಡೆವೂರು ಮಠದ ಬೆಳವಣಿಗೆ ಮೂಲಕ ಸನಾತನ ಸಂಸತಿ ರಕ್ಷಣೆಗೆ ಕೈಜೋಡಿಸೋಣ ಎಂದು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದಲ್ಲಿ ಶ್ರೀಗಳ 21ನೇ ಚಾತುಮಾರ್ಸ್ಯ ಮಂಗಲೋತ್ಸವ ಅಂಗವಾಗಿ ಮಂಗಳವಾರ ಹಮ್ಮಿಕೊಂಡ 48 ಗಂಟೆಗಳ ಅಖಂಡ ಭಜನಾ ಮಂಗಲೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಕರ್ನಾಟಕ ವಿಧಾನ ಪರಿಷತ್​ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಭದ್ರಾವತಿ ಬನಶಂಕರಿ ದೇವಸ್ಥಾನದ ಅಧ್ಯಕ್ಷ ಎಂ.ಪ್ರಭಾಕರ, ಮುಳಿಂಜ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಹರಿನಾಥ ಭಂಡಾರಿ, ಧಾರ್ಮಿಕ ಮುಂದಾಳುಗಳಾದ ಪಿ.ಆರ್​.ಶೆಟ್ಟಿ ಪೊಯ್ಯೆಲು, ಶ್ರೀಧರ ಶೆಟ್ಟಿ ಮುಟ್ಟಂ, ಶಶಿಧರ ಶೆಟ್ಟಿ ಗ್ರಾಮಚಾವಡಿ ಶುಭಾಶಂಸನೆಗೈದರು.

ಶ್ರಾವಣ್ಯ ಕೊಂಡೆವೂರು ಪ್ರಾರ್ಥಿಸಿದರು. ಗಂಗಾಧರ ಕೊಂಡೆವೂರು ಸ್ವಾಗತಿಸಿದರು. ದಿನಕರ ಹೊಸಂಗಡಿ ನಿರೂಪಿಸಿದರು. ಸರ್ವೇಶ್​ ಕೊಂಡೆವೂರು ವಂದಿಸಿದರು.

ಬುಧವಾರ ಪ್ರಾತಃ ಪೂಜೆಯ ನಂತರ ನಕ್ಷತ್ರವನದ ಆನಂದತೀರ್ಥ ಪುಷ್ಕರಿಣಿಯಲ್ಲಿ ಶ್ರೀಗಳಿಂದ ಮೃತ್ತಿಕಾ ವಿಸರ್ಜನೆ ನಡೆದು ಭಕ್ತರು ಪವಿತ್ರ ತೀರ್ಥ ಸ್ನಾನ ಮಾಡಿ ಮಂಗಲ ಮಂತ್ರಾಕ್ಷತೆ ಸ್ವೀಕರಿಸಿದರು.

ಸಂಸ್ಕಾರ ಸಂಸತಿಗಾಗಿ ಜಗತ್ತೇ ನೋಡುತ್ತಿರುವ ಪವಿತ್ರ ಭರತ ಭೂಮಿಯ ಸನಾತನ ಧರ್ಮವನ್ನು ಉಳಿಸಿ ಬೆಳೆಸಲು ಭೇದಗಳಿಲ್ಲದೆ ಒಗ್ಗಟ್ಟಾಗೋಣ. ಯುವ ಸಮೂಹಕ್ಕೆ ಆಧ್ಯಾತ್ಮಿಕ, ಧಾರ್ಮಿಕ ಮೌಲ್ಯಗಳನ್ನು ದಾಟಿಸುವ ಯತ್ನ ಸಮರೋಪಾದಿಯಲ್ಲಿ ಆಗಬೇಕು. ಮೋನಪ್ಪ ಭಂಡಾರಿ, ಕರ್ನಾಟಕ ವಿಧಾನ ಪರಿಷತ್​ ಮಾಜಿ ಸದಸ್ಯ
ಮೋನಪ್ಪ ಭಂಡಾರಿ, ಕರ್ನಾಟಕ ವಿಧಾನ ಪರಿಷತ್​ ಮಾಜಿ ಸದಸ್ಯ