ಮೈಸೂರು: ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಸಿದ್ಧಗಂಗಾ ಮಠದ ಲಿಂ.ಡಾ.ಶಿವಕುಮಾರ ಸ್ವಾಮೀಜಿ ಅವರ 117ನೇ ಜಯಂತಿಯನ್ನು ಸೋಮವಾರ ನಗರದಲ್ಲಿ ವಿವಿಧಡೆ ಸಂಘ-ಸಂಸ್ಥೆಗಳ ವತಿಯಿಂದ ಹತ್ತು-ಹಲವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಆಚರಿಸಲಾಯಿತು.
ಜನಸೇವಕ ಯುವ ಬ್ರಿಗೇಡ್ ವತಿಯಿಂದ ಕುವೆಂಪು ನಗರದಲ್ಲಿರುವ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಶಿವಕುಮಾರ ಸ್ವಾಮೀಜಿ ಅವರ 117ನೇ ಜಯಂತಿ ಅಂಗವಾಗಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಆನಂತರ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.
ಅಧ್ಯಕ್ಷ ಆರ್.ಮಹೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಡಿ.ರಾಘವೇಂದ್ರ, ಉಪಾಧ್ಯಕ್ಷ ವೀರೇಶ್ ರೆಡ್ಡಿ, ಖಜಾಂಚಿ ಪ್ರವೀಣ್ ಕುಮಾರ್, ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಜಗದೀಶ್, ನಂಜುಂಡಸ್ವಾಮಿ, ಮಹಿಳಾ ಸದಸ್ಯರಾದ ಮಾಯಾ, ನಾಗರಾಜ್, ಮಲ್ಲಿಕಾರ್ಜುನ್, ಯೋಗೇಶ್, ಶ್ರೀಕಾಂತ್ ಕಶ್ಯಪ್, ಪಿ.ಸತೀಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಇದಲ್ಲದೆ ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನ, ಅಗ್ರಹಾರ ವೃತ್ತ ಸೇರಿದಂತೆ ನಗರದ ಹಲವೆಡೆ ವಿವಿಧ ಸಂಘಟನೆಗಳ ವತಿಯಿಂದ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಪಾನಕ, ಮಜ್ಜಿಗೆ ವಿತರಿಸಲಾಯಿತು.