ಜಿಲ್ಲೆ

ಹಿಂದೆ ಹೇಳಿದ ಮಾತು ನೆನಪಿಸಿಕೊಳ್ಳಬೇಕು: ಪ್ರತಾಪಸಿಂಹ ಅವರಿಗೆ ಎಸ್ ಎ ರಾಮದಾಸ್ ಟಾಂಗ್

ಮೈಸೂರು: ನನಗೆ ಟಿಕೆಟ್ ತಪ್ಪಿದಾಗ ಪ್ರತಾಪಸಿಂಹ ಅವರು ಯಾರೇ ಅಭ್ಯರ್ಥಿಯಾದರೂ ಅವರನ್ನು ಗೆಲ್ಲಿಸಬೇಕು ಎಂದು ಧೈರ್ಯ ಹೇಳಿದ್ದನ್ನು ನೆನಪು ಮಾಡಿಕೊಳ್ಳಬೇಕು ಎನ್ನುವ ಮೂಲಕ ತಮಗೆ ಟಿಕೆಟ್ ತಪ್ಪಿದಾಗ ಪ್ರತಾಪಸಿಂಹ ಅವರ ನಡೆಯನ್ನು ಮಾಜಿ ಶಾಸಕ ಎಸ್.ಎ.ರಾಮದಾಸ್ ನೆನಪು ಮಾಡಿಕೊಂಡರು.
ನಾಲ್ಕು ಬಾರಿ ಶಾಸಕನಾಗಿದ್ದ ನನಗೆ ಹಿಂದಿನ ಚುನಾವಣೆಯಲ್ಲಿ ಟಿಕೆಟ್ ಕೊಡಲಿಲ್ಲ. ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡುವುದಾಗಿ ನಾಯಕರು ಹೇಳಿದಾಗ ಒಪ್ಪಿದೆ. ಕಾರ್ಯಕರ್ತರ ಸಭೆಯಲ್ಲಿ ಪ್ರತಾಪಸಿಂಹ ಅವರು ನನಗೆ ಆಡಿದ ಮಾತುಗಳನ್ನು ನೆನಪಿಸಿಕೊಳ್ಳಬೇಕು. ಯಾರೇ ಅಭ್ಯರ್ಥಿಯಾದರೂ ಗೆಲ್ಲಿಸುವುದು ನಮ್ಮ ಗುರಿಯಾಗಬೇಕು ಎಂದಿದ್ದರು. ಇವತ್ತಿಗೂ ನಮ್ಮ ಲೀಡರ್ ಅಗಿರುವ ಸಂಸದ ಪ್ರತಾಪಸಿಂಹ ಅವರು ಆ ಧೈರ್ಯ ತೋರಬೇಕು ಎಂದರು.
ನಾನು ಇನ್ನೊಬ್ಬರಿಗೆ ಪಾಠ ಮಾಡುವಷ್ಟು ದೊಡ್ಡವನಲ್ಲ. ನಾನು ಸೋತ ಬಳಿಕವೂ ಪಕ್ಷದ ಕೆಲಸ ಮಾಡಿದ್ದೇನೆ. ರಾಮದಾಸ್ ಪಕ್ಷಕ್ಕಾಗಿ ಕೆಲಸ ಮಾಡಿದ್ದರು ಎಂದು ಪ್ರತಾಪ್ ಸಿಂಹ ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದನ್ನು ನೆನಪು ಮಾಡಿಕೊಡುತ್ತೇನೆ ಎಂದರು.
ಮಹಾರಾಜರು ಮೈಸೂರು ಅಭಿವೃದ್ಧಿಗೆ ತಮ್ಮ ಸರ್ವಸ್ವ ಅರ್ಪಿಸಿದ್ದಾರೆ. ಈಗ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬಗ್ಗೆ ಹಗುರವಾಗಿ ಮಾತನಾಡಬಾರದು. ಯದುವೀರ್ ಅವರು ಜನರ ಜತೆ ಬೆರೆಯುತ್ತಾರೋ ಇಲ್ಲವಾ ಎಂಬುದನ್ನು ಪಕ್ಷದ ರಾಷ್ಟ್ರೀಯ ನಾಯಕರು ನಿರ್ಧರಿಸುತ್ತಾರೆ ಎಂದು ಹೇಳಿದರು.
ಕೇಂದ್ರದಲ್ಲಿ ಇದುವರೆಗೂ ಅಭ್ಯರ್ಥಿ ಯಾರೆಂಬುದು ಅಂತಿಮವಾಗಿಲ್ಲ. ಪಕ್ಷಕ್ಕೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ನಾವೆಲ್ಲಾ ಮಾತನಾಡುತ್ತಿದ್ದೇವೆ. ಲೋಕಸಭೆ ಚುನಾವಣೆ ಸಂಬಂಧ ಟಿಕೆಟ್ ಹಂಚಿಕೆ ವಿಚಾರವಾಗಿ ಇನ್ನೂ ಪಾರ್ಲಿಮೆಂಟರಿ ಸಭೆ ನಡೆದಿಲ್ಲ. ಆದರೂ ಅನವಶ್ಯಕ ಚರ್ಚೆ ನಡೆಯುತ್ತಿದೆ ಎಂದರು.