ಜಿಲ್ಲೆ

ಇಂದ್ರಿಯಗಳು ಮಂದವಾಗುವ ಮುಂಚೆ ಭಗವಂತನನ್ನು ಸ್ಮರಿಸಿ

ಸೋಮನಾಥ ರೆಡ್ಡಿ

ನರೇಗಲ್ಲ: ಶರೀರಗೂಡುವೋಗದ ಮುನ್ನ ನೆನೆ ಕೂಡಲ ಸಂಗಮನ ಎಂದು ಜಗಜ್ಯೋತಿ ಬಸವಣ್ಣನವರು ಹೇಳಿದ್ದಾರೆ. ಈ ಮಾತನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ದೇಹದಲ್ಲಿನ ಇಂದ್ರಿಯಗಳು ಮಂದವಾಗುವ ಮುಂಚೆಯೆ ನಾವು ಭಗವಂತನನ್ನು ಸ್ಮರಿಸಬೇಕು ಎಂದು ಹಾಲಕೆರೆ ಸಂಸ್ಥಾನ ಪೀಠದ ಜ. ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.

ಹಾಲಕೆರೆ ಗ್ರಾಮದ ಶ್ರೀ ಅನ್ನದಾನೇಶ್ವರ ಶ್ರೀಮಠದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಧರ್ಮ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ದರೂರು ಸಂಗನಬಸವೇಶ್ವರಮಠದ ಕೊಟ್ಟೂರು ಸ್ವಾಮೀಜಿ ಅರಿವಿನಂದ ಮನುಷ್ಯನ ಜ್ಞಾನದ ವಿಸ್ತಾರವು ಹೆಚ್ಚಾಗುತ್ತದೆ. ಈ ಜ್ಞಾನವನ್ನು ಪಡೆಯಲು ಜಾತ್ರೆ, ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳಬೇಕು. ಶ್ರೀಗಳು, ವಿದ್ವಜ್ಜನರು, ವಿದ್ವಾಂಸರು ನೀಡುವ ಪ್ರವಚನ, ಮಾತುಗಳನ್ನು ಆಲಿಸಬೇಕು. ಅವುಗಳನ್ನು ಅನುಷ್ಠಾನಗೊಳಿಸಿದರೆ ಜೀವನ ಪಾವನವಾಗುತ್ತದೆ ಎಂದು ಹೇಳಿದರು.

ಲಿಂ. ಡಾ. ಅಭಿನವ ಅನ್ನದಾನ ಮಹಾಸ್ವಾಮೀಜಿಯವರು ಮಹಿಳೆಯರಿಗೆ ತೇರು ಎಳೆಯುವ ಅವಕಾಶ ನೀಡಿ ಬೆಳ್ಳಿ ತೇರನ್ನು ಮಾಡಿಸಿದ್ದಾರೆ. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ತಾಯಂದಿರು ತೇರನ್ನೆಳೆದಿರುವುದು ಗುರುಗಳಿಗೂ, ಹರಗುರು ಚರಮೂರ್ತಿಗಳಿಗೂ ತುಂಬಾ ಆನಂದವನ್ನುಂಟು ಮಾಡಿದೆ ಎಂದರು.

ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ಆಶೀರ್ವಚನ ನೀಡಿ, ಹಾಲಕೆರೆ ಶ್ರೀಮಠವು ಆಧ್ಯಾತ್ಮಿಕ ಸಂಪತ್ತಿನಿಂದ ಕೂಡಿದೆ. ಇಲ್ಲಿ ಭಕ್ತರು ಮತ್ತು ಮಠಾಧೀಶರು ಬಯಸುವ ಎಲ್ಲ ಆಧ್ಯಾತ್ಮಿಕ ಸಂಪತ್ತು ಸಿಗುತ್ತದೆ. ಲಿಂ. ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳವರು ಮತ್ತು ಹಿಂದಿನ ಎಲ್ಲ ಗುರುಪರಂಪರೆಯವರು ಈ ಮಠವನ್ನು ಭಕ್ತರ ಶ್ರದ್ಧಾ ಕೇಂದ್ರವನ್ನಾಗಿಸುವಲ್ಲಿ ಸಫಲರಾಗಿದ್ದಾರೆ. ಈಗ ನಾವು ಅದರ ಸಿಹಿ ಫಲಗಳನ್ನು ಉಣ್ಣುತ್ತಿದ್ದೇವೆ ಎಂದರು.

ದರೂರು ಸಂಗನಬಸವೇಶ್ವರ ಮಠದ ಕೊಟ್ಟೂರು ಸ್ವಾಮೀಜಿ, ಹಳಿಂಗಳಿ ಕಮರಿಮಠದ ಶಿವಾನಂದ ದೇವರು, ಗದಗ ಅಡವೀಂದ್ರಸ್ವಾಮಿಮಠದ ಮಹೇಶ್ವರ ಸ್ವಾಮೀಜಿ, ಸೋಮಸಮುದ್ರ ಸಿದ್ಧಲಿಂಗ ಸ್ವಾಮೀಜಿ, ಶ್ರೀಧರಗಡ್ಡೆ ಮರಿಕೊಟ್ಟೂರ ದೇವರು, ಬೂದಗುಂಪ ಸಿದ್ಧೇಶ್ವರ ದೇವರು, ವ್ಯಾಕರನಾಳದ ವಿಶ್ವೇಶ್ವರ ದೇವರು ಇದ್ದರು. ಸಮಾರಂಭದಲ್ಲಿ ಹಿರಿಯ ತಾಯಂದಿರನ್ನು ಸನ್ಮಾನಿಸಲಾಯಿತು.