ವಿಜಯಪುರದ ಹುತಾತ್ಮ ವೃತ್ತದಲ್ಲಿ ಹಮ್ಮಿಕೊಂಡಿದ್ದ ಉ ವೀರಭೂಮಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ. ಸುಮಾ ಬೋಳರೆಡ್ಡಿ, ವಾಗ್ಮಿ ಪ್ರಕಾಶ ಮಲ್ಪೆ, ಸಚಿನ್​ ಕುಳಗೇರಿ ಮತ್ತಿತರರಿದ್ದಾರೆ. 
ಜಿಲ್ಲೆ

ಸ್ವಾತಂತ್ರಕ್ಕಾಗಿ ಪ್ರಾಣ ತ್ಯಾಗ ಮಾಡಿದ ಅಮರ ಕಲಿಗಳನ್ನು ಸ್ಮರಿಸಿ

ವಿಜಯಪುರ: ಭಾರತದ ಸ್ವಾತಂತ್ರ ಹೋರಾಟಕ್ಕೆ ಕ್ರಾಂತಿಕಾರಿ ಬದಲಾವಣೆಯ ದಿಕ್ಕು ನೀಡಿ ಬ್ರಿಟಿಷರ ಕಪಿಮುಷ್ಠಿಯಿಂದ ಭಾರತ ಮಾತೆ ಬಿಡುಗಡೆಯಾಗಬೇಕೆಂಬ ಉದ್ದೇಶಕ್ಕೆ ತಮ್ಮ ಪ್ರಾಣ ತ್ಯಾಗ ಮಾಡಿದ ಅಮರ ಕಲಿಗಳನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ವಾಗ್ಮಿ ಪ್ರಕಾಶ ಮಲ್ಪೆ ಹೇಳಿದರು.

ನಗರದ ಹುತಾತ್ಮ ವೃತ್ತದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ ವತಿಯಿಂದ ಭಗತ ಸಿಂಗ್​, ರಾಜಗುರು, ಸುಖದೇವ ಅವರ ಹುತಾತ್ಮ ದಿನದ ಪ್ರಯುಕ್ತ ಗುರುವಾರ ಹಮ್ಮಿಕೊಂಡಿದ್ದ ಉ ವೀರಭೂಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತಮಾತೆಯನ್ನು ಸ್ವತಂತ್ರಗೊಳಿಸುವ ಮಹಾನ್​ ಗುರಿ ಸಾಧಿಸಲು ಯಾವುದೇ ತ್ಯಾಗವು ಸಾಕಾಗುವುದಿಲ್ಲ ಎಂದು ಭಗತ ಸಿಂಗ್​, ಸುಖದೇವ್​ ಹಾಗೂ ರಾಜಗುರು ಅವರ ಸ್ಫೂತಿದಾಯಕ ದೃಷ್ಟಿಕೋನವಾಗಿತ್ತು. ಚಂದ್ರಶೇಖರ್​ ಆಜಾದ್​ ಅವರ ಸಹಾಯದಿಂದ ಹಿಂದುಸ್ಥಾನ ಸೋಷಿಯಲಿಸ್ಟ್​ ರಿಪಬ್ಲಿಕನ್​ ಆರ್ಮಿ (ಎಚ್​ಎಸ್​ಆರ್​ಎ) ರಚಿಸುವ ಮೂಲಕ ಸ್ವಾತಂತ್ರದ ಜಾಗೃತಿ ಕಾರ್ಯಕ್ಕೆ ಇಳಿದರು. ಸ್ವಾತಂತ್ರಕ್ಕಾಗಿ ನಾವುಗಳು ಪ್ರಾಣ ತ್ಯಾಗ ಮಾಡಲು ಸಿದ್ಧವೆಂದು ನೇಣಿಗೆ ಹಾಕುವ ದಿನವೂ ಕೂಡ ನಗು ನಗುತ್ತಾ ರಂಗ ದೇ ಬಸಂತಿ ಚೋಲಾ ಹಾಡನ್ನು ಹಾಡಿ ತಮ್ಮ ಪ್ರಾಣವನ್ನು ಮೂವರು ರತ್ನಗಳು ಅರ್ಪಿಸಿದರು ಎಂದು ತಿಳಿಸಿದರು.

ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಸಚಿನ್​ ಕುಳಗೇರಿ ಮಾತನಾಡಿ, ದೇಶದ ಬಲಿದಾನವನ್ನು ಮಾಡಿದ ವ್ಯಕ್ತಿಗಳನ್ನು ಸ್ಮರಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ. ಆರ್​ಎಸ್​ಎಸ್​ನ 100 ವರ್ಷದ ಕಾಲಟ್ಟದಲ್ಲಿ ಸಮಾಜದಲ್ಲಿ ಪಂಚ ಪರಿವರ್ತನೆ ತರುವ ನಿಟ್ಟಿನಲ್ಲಿ ಪರಿಸರ, ನಾಗರಿಕ ಕರ್ತವ್ಯ, ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನ ಹಾಗೂ ಸ್ವದೇಶಿ ವಿಷಯಗಳ ಕುರಿತು ನಮ್ಮಲ್ಲಿ ನಾವು ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ ಸಂಗಮೇಶ ಡೋಂಗರಗಾಂವಿ ಮತ್ತು ಎಬಿವಿಪಿ ವಿಭಾಗ ಸಹ ಪ್ರಮುಖ ಅಮಿತ್​ಕುಮಾರ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮುಖರಾದ ಡಾ. ಎಚ್​. ವೆಂಕಟೇಶ, ಬಸವರಾಜ ಯಾದವಾಡ ಮತ್ತಿತರರಿದ್ದರು.

ನಗರ ಟಕದ ಅಧ್ಯಕ್ಷೆ ಸುಮಾ ಬೋಳರೆಡ್ಡಿ ಸ್ವಾಗತಿಸಿದರು. ನಗರ ಕಾರ್ಯದರ್ಶಿ ಸಂದೀಪ ಅರಳಗುಂಡಿ ವಂದಿಸಿದರು. ಬಳಿಕ ತಾಂಡವ ನೃತ್ಯ ಅಕಾಡೆಮಿ ಹಾಗೂ ವಿದ್ಯಾರ್ಥಿಗಳಿಂದ ಸಾಂಸತಿಕ ಕಾರ್ಯಕ್ರಮಗಳು ನಡೆದವು.