ಜಿಲ್ಲೆ

ಪಾಲಕರ ಕಷ್ಟ ನೆನೆದು ಉನ್ನತ ಹುದ್ದೆ ಅಲಂಕರಿಸಿ: ನಿಲಯಪಾಲಕಿ ಡಿ.ಮೀನಾ

ಮೈಸೂರು: ವಿದ್ಯಾರ್ಥಿಗಳಿಗಾಗಿ ಪ್ರತಿವರ್ಷ ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡುತ್ತಿದ್ದು, ಅದನ್ನು ಸದುಪಯೋಗ ಪಡಿಸಿಕೊಂಡು ಚೆನ್ನಾಗಿ ಓದಿ ಗುರಿ ಸಾಧಿಸಬೇಕು ಎಂದು ನಿಲಯಪಾಲಕಿ ಡಿ.ಮೀನಾ ಹೇಳಿದರು.

ನಗರದ ಬೋಗಾದಿಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ವೈದ್ಯಕೀಯ ಮತ್ತು ತಾಂತ್ರಿಕ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನಿಲಯದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತನ್ನು ನೀಡುವುದರೊಂದಿಗೆ ರಾಜ್ಯದಲ್ಲಿ ಹೊಸದಾಗಿ 150 ಹಾಸ್ಟೆಲ್‌ಗಳನ್ನು ಮಂಜೂರು ಮಾಡಿದ್ದಾರೆ. ಇದರಲ್ಲಿ ಮೈಸೂರು ಜಿಲ್ಲೆಗೆ 14 ಹೊಸ ಹಾಸ್ಟೆಲ್‌ಗಳನ್ನು ಮಂಜೂರು ಮಾಡಿರುವುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗೂ ಹಾಸ್ಟೆಲ್ ಸೌಲಭ್ಯ ಸಿಗುವಂತಾಗಿದೆ ಎಂದು ವಿವರಿಸಿದರು.

ನಿಮ್ಮ ತಂದೆ, ತಾಯಿಯರು ಸಹ ದೂರದ ಊರುಗಳಿಂದ ನಿಮ್ಮನ್ನು ಓದಲು ಮೈಸೂರಿಗೆ ಕಳಿಸಿದ್ದಾರೆ. ಸಾಮಾನ್ಯವಾಗಿ ಬಿಸಿಎಂ ಹಾಸ್ಟೆಲ್‌ನಲ್ಲಿರುವವರೆಲ್ಲ ರೈತರು, ಬಡವರ ಮಕ್ಕಳೇ ಆಗಿರುವುದರಿಂದ ಪಾಲಕರ ಕಷ್ಟಗಳನ್ನು ನೆನೆದುಕೊಂಡು ಮೊಬೈಲ್‌ನಿಂದ ದೂರವಿದ್ದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಸರ್ಕಾರದ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಆ ಮೂಲಕ ನಿಮ್ಮ ತಂದೆ, ತಾಯಿ, ಓದಿದ ಕಾಲೇಜು, ಹಾಸ್ಟೆಲ್‌ಗೆ ಒಳ್ಳೆಯ ಹೆಸರು ತರಬೇಕು ಎಂದರು.

ಇದೇ ಸಂದರ್ಭದಲ್ಲಿ ಇಂಜಿನಿಯರಿಂಗ್‌ನಲ್ಲಿ ಹೆಚ್ಚು ಅಂಕ ಪಡೆದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಧುರಾ ಅವರನ್ನು ಅಭಿನಂದಿಸಲಾಯಿತು. ಹಿರಿಯ ವಿದ್ಯಾರ್ಥಿನಿಯರು ಕುಡಿಯುವ ನೀರಿನ ಫಿಲ್ಟರ್ ಅನ್ನು ಹಾಸ್ಟೆಲ್‌ಗೆ ಕೊಡುಗೆಯಾಗಿ ನೀಡಿದರು.

ಹಿರಿಯ ವಿದ್ಯಾರ್ಥಿನಿಯರಾದ ಸ್ವಾತಿ, ಅಮೃತಾ, ಭೂಮಿಕಾ, ಸುಶ್ಮಿತಾ, ನಾಗಾಶ್ರಯಾ, ಕೀರ್ತನಾ, ಹರ್ಷಿತಾ, ಸ್ಪಂದನಾ ಇತರರು ಇದ್ದರು.