ಭಟ್ಕಳ: ಸುಖ ದುಃಖವನ್ನು ಅನುಭವಿಸುತ್ತ ಜೀವನ ಪರಿತಪಿಸುತ್ತಿದೆ. ಸಂಸಾರ ನಡೆಯುತ್ತಿದೆ. ಆದರೂ ತೃಪ್ತಿಯಿಲ್ಲ. ಗುರುವಿನ ಉಪಸ್ಥಿತಿ, ಸಂಸ್ಕಾರ ಈಶ್ವರನ ಅನುಗ್ರಹವಾದರೆ ಇವೆಲ್ಲ ಬಂಧನದಿಂದ ಹೊರಬರಲು ಸಾಧ್ಯ ಎಂದು ಶ್ರೀ ಸದೋಜ್ಯಾತ ಶಂಕರಾಶ್ರಮ ಸ್ವಾಮೀಜಿ ಹೇಳಿದರು.
ತಾಲೂಕಿನ ಚಿತ್ರಾಪುರ ಮಠದಲ್ಲಿ ಚಾತುರ್ಮಾಸ್ಯ ವ್ರತ ಸ್ವೀಕರಿಸಿ, ಬಳಿಕ ಆಯೋಜಿಸಿದ್ದ ಧರ್ಮಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ಮನಸನ್ನು ಶಾಂತವಾಗಿ ಇಡಬೇಕು. ಅದಕ್ಕೆ ಜಪದ ಮೊರೆ ಹೋಗಬೇಕು. ಜಪ ಮಾಡುವಾಗ ಮೊದಲು ಗುರುಸ್ಮರಣೆ, ಗುರುವಿನ ಪಾದುಕೆ ಸ್ಮರಣೆ ಮಾಡಿದಾಗ ಶರೀರವೂ ಅದಮ್ಯ ಚೈತನ್ಯ ಪಡೆದು ಎಲ್ಲ ಗೊಂದಲಗಳು ಕೆಲವು ಕ್ಷಣಗಳಿಗಾಗಿ ಹರಿದುಹೋಗಿ ಮನಸು ಶಾಂತವಾಗುತ್ತದೆ ಎಂದರು.
ನಾನು ಗುರುವಿನವನಾಗಿ, ನಮ್ಮ ಇಷ್ಟದೇವರರವಾಗಿ ಶಾಂತವಾಗಿ ಕುಳಿತು ಶ್ವಾಸ, ಪ್ರಶ್ವಾಸದ ಕಡೆಗೆ ಲಕ್ಷ್ಯ ನೀಡಿ, ಆಜ್ಞ್ಯ ಚಕ್ರದಲ್ಲಿ ಧಾರಣೆ ಮಾಡಿದಲ್ಲಿ ಧೈರ್ಯ ಬೆಳೆಯುತ್ತದೆ. ಇದನ್ನು ಅಭ್ಯಾಸ ಮಾಡಿಕೊಂಡರೆ ಸುಖ ದುಃಖದ ಮಧ್ಯ ಅಲೆದಾಡುವುದು ತಪ್ಪುತ್ತದೆ. ಶಾಶ್ವತವಾದ ಶಾಂತಿ ದೊರೆಯುತ್ತದೆ ಎಂದರು.
ಶ್ರೀಗಳಿಂದ ಗೌರವ ಸ್ವೀಕರಿಸಿ ಮಾತನಾಡಿದ ನಟ ಅನಂತನಾಗ, ನಾನು ಚಿಕ್ಕವನಿದ್ದಾಗ ಚಿತ್ರಾಪುರ ಮಠದಲ್ಲಿ ಬಾಲ್ಯದ ದಿನಗಳನ್ನು ಕಳೆದಿದ್ದೆ. ಸ್ವಾಮಿ ರಾಮದಾಸರು, ಸ್ವಾಮಿ ಪರಿಜ್ಞಾನಶ್ರಮ ಗುರುಗಳು, ಸದ್ಯೋಜಾತ ಗುರುಗಳ ಆಶೀರ್ವಾದಿಂದ ಇಲ್ಲಿನ ಸಂಸ್ಕಾರ ಪಡೆದಿದ್ದೇನೆ. 1998ರಲ್ಲಿ ನನಗೆ ಯಾವುದೆ ಪ್ರಶಸ್ತಿ ದೊರೆಯುವುದಕ್ಕಿಂತ ಮೊದಲೇ ಶ್ರೀಗಳೆ ಗೌರವಿಸಿ ಜಗತ್ತಿನ ಅತ್ಯುನ್ನತ ಪ್ರಶಸ್ತಿ ನೀಡಿದ್ದರು ಎಂದರು.
ಶ್ರೀಗಳು, ನಟ ಅನಂತನಾಗ ಪತ್ನಿ ಮತ್ತು ಪುತ್ರಿಯರನ್ನು ಗೌರವಿಸಿದರು. ಚಿತ್ರಾಪುರ ಮಠದ ಚೆರ್ಮನ್ ಪ್ರವೀಣ ಕಡ್ಲೆ, ಶಿರಸಿ ಅರ್ಬನ್ ಬ್ಯಾಂಕ್ ಚೆರ್ಮನ್ ಜೈದೇವ ನಿಲೇಕಣಿ ಸೇರಿದಂತೆ ದೇಶ ವಿದೇಶಗಳಿಂದ ಆಗಮಿಸಿದ ಭಕ್ತರು ಶ್ರೀಗಳ ಆಶೀರ್ವಾದ ಪಡೆದರು.