ಜಿಲ್ಲೆ

ಭಾರತೀಯ ಯೋಧರನ್ನು ಹೆಮ್ಮೆಯಿಂದ ಸ್ಮರಿಸಿ

ಕಿರಣ್ ಗೌಡ.ಜಿ

 ಹುಣಸೂರು: ಪಹಲ್ಗಾಮ್‌ನಲ್ಲಿ 26 ಮಂದಿ ಪ್ರವಾಸಿಗರನ್ನು ಅಮಾನುಷವಾಗಿ ಹತ್ಯೆಗೈದ ನರರಾಕ್ಷಸರ ಹುಟ್ಟಡಗಿಸಿದ ಭಾರತೀಯ ಸೇನೆಯನ್ನು ನಾವು ಹೆಮ್ಮೆಯಿಂದ ಸ್ಮರಿಸಬೇಕಿದೆ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಅಭಿಪ್ರಾಯಪಟ್ಟರು.

ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಸಹಯೋಗದಲ್ಲಿ ಸೋಮವಾರ ನಗರದಲ್ಲಿ ಆಯೋಜಿಸಿದ್ದ ತಿರಂಗಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ಮೇ.22ರ ಪಹಲ್ಗಾಮ್ ಘಟನೆ ದೇಶದ ಜನರ ನಿದ್ದೆಗೆಡಿಸಿತ್ತು. ಪ್ರಧಾನಿ ಮೋದಿ ನೇತೃತ್ವದಲ್ಲಿ ಭಯೋತ್ಪಾದಕರು ಕಲ್ಪನೆಗೂ ಮೀರಿದ ಕಾರ್ಯಾಚರಣೆ ಮೂಲಕ ನರರಾಕ್ಷಸರನ್ನು ಬಲಿಪಡೆದರು. ಭಾರತ ಶಾಂತಿ ಪ್ರಿಯ ರಾಷ್ಟ್ರ, ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ಹೊಂದಿರುವ ರಾಷ್ಟ್ರವಾಗಿದೆ. ಇದೀಗ ಭಾರತ ಈ ಹಿಂದಿನ ಭಾರತವಲ್ಲ, ಬದಲಾದ ಭಾರತ ಎನ್ನುವುದನ್ನು ಮೋದೀಜಿ ತೋರಿಸಿಕೊಟ್ಟಿದ್ದಾರೆ. ಭಾರತೀಯ ಸೇನೆ ಕಾರ್ಯಾಚರಣೆಯ ಮೂಲಕ ವಿಶ್ವಮಟ್ಟಕ್ಕೆ ಬೆಳಗಿದೆ. ಭಾರತೀಯ ಯೋಧರು ಈ ನಾಡಿನ ರಕ್ಷಣೆಗಾಗಿ ಜೀವಮುಡಿಪಿಟ್ಟು ಹೋರಾಡಿದ್ದಾರೆ. ಅವರ ತ್ಯಾಗ ಬಲಿದಾನಗಳೇ ನಾವು ಇಲ್ಲಿ ಸುಖವಾಗಿ ಬದುಕಲು ಸಾಧ್ಯವಾಗಿದೆ ಎಂದರು.

ಸೈನಿಕರ ನೆಲೆಬೀಡು: ನಾವು ಪುಣ್ಯವಂತರು. ಹುಣಸೂರು ನೆಲದಲ್ಲಿ ನೂರಾರು ಸೈನಿಕರು ಇದ್ದು, ಇವರೆಲ್ಲರೂ ದೇಶರಕ್ಷಣೆಗಾಗಿ ದುಡಿಯುತ್ತಿದ್ದಾರೆ. ಎರಡನೇ ಮಹಾಯದ್ಧದಲ್ಲೂ ಭಾಗವಹಿಸಿದ್ದ ಯೋಧರು ನಮ್ಮಲ್ಲಿದ್ದರು. ಇವರೆಲ್ಲರನ್ನು ಇಂದು ಸನ್ಮಾನಿಸುವ ಪುಣ್ಯ ಕಾರ್ಯ ನಮ್ಮದಾಗಿದೆ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗಣೇಶ್ ಕುಮಾರಸ್ವಾಮಿ ಮಾತನಾಡಿ, ಭಾರತೀಯ ಯೋಧರ ಸಾಹಸ ಶೌರ್ಯ ಮತ್ತೊಮ್ಮೆ ವಿಶ್ವ ನೋಡಿದೆ. ಜಾತಿ, ಧರ್ಮಗಳನ್ನು ಕೇಳಿಕೊಂಡು ಹತ್ಯ ಮಾಡುವಂತಹ ಹೀನಮನಸಿನ ಸಿದ್ಧಾಂತಗಳಿಗೆ ದೇಶದಲ್ಲಿ ಜಾಗವಿಲ್ಲ ಎನ್ನುವುದನ್ನು ಪ್ರಧಾನಿ ಮೋದಿ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದರು.

ಇದೇ ವೇಳೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಕೆ.ಪಿ.ದಿವಾಕರ್, ಉಪಾಧ್ಯಕ್ಷ ನಂಜುಂಡಸ್ವಾಮಿ, ಮಾಜಿ ಸೈನಿಕರಾದ ಲೂಯೀಸ್ ಪೆರೇರಾ, ಲಕ್ಷ್ಮೀಕುಮಾರ್, ಉತ್ತಪ್ಪ, ಅಬ್ದುಲ್ಲಾ, ಕೃಷ್ಣ, ವೀರನಾರಿಯರಾದ ಗೀತಾ, ಶೋಭಾವತಿ ಅವರನ್ನು ಸನ್ಮಾನಿಸಲಾಯಿತು.

ಜಿಟಿಜಿಟಿ ಮಳೆಯ ನಡುವೆಯೇ ತಿರಂಗಾ ಯಾತ್ರೆ ಸಂವಿಧಾನ ವೃತ್ತದಿಂದ ಆರಂಭಗೊಂಡು ಕಲ್ಪತರು ವೃತ್ತ, ಬಜಾರ್ ರಸ್ತೆ, ಜೆಎಲ್‌ಬಿ ರಸ್ತೆ, ಎಸ್‌ಜೆ ರಸ್ತೆಯನ್ನು ಹಾದು ಮುನೇಶ್ವರ ಕಾವಲ್ ಮೈದಾನದಲ್ಲಿ ಸಂಪನ್ನಗೊಂಡಿತು. ನಗರದ ಛಾಯಾದೇವಿ ಬಿಎಡ್ ಕಾಲೇಜು, ಡಿ.ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಸರ್ಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಯಾತ್ರೆಯಲ್ಲಿ ಪಾಲ್ಗೊಂಡು ತ್ರಿವರ್ಣ ಧ್ವಜ ಹಿಡಿದು ವೀರ ಸೈನಿಕರಿಗೆ ಜಯಘೋಷ ಕೂಗಿ ಸಂಭ್ರಮಿಸಿದರು. ತಾಲೂಕು ಹನುಮಂತೋತ್ಸವ ಸಮಿತಿ ಅಧ್ಯಕ್ಷ ವಿ.ಎನ್.ದಾಸ್, ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್, ಬಿಜೆಪಿ ತಾಲೂಕು ಅಧ್ಯಕ್ಷ ಕಾಂತರಾಜು, ನಗರಮಂಡಲ ಅಧ್ಯಕ್ಷ ನಾರಾಯಣ್, ಜಿಲ್ಲಾ ಉಪಾಧ್ಯಕ್ಷ ಬಿ.ಎಸ್.ಯೋಗಾನಂದಕುಮಾರ್, ಕಮಲಾ ಪ್ರಕಾಶ್, ವೆಂಕಟಮ್ಮ,ಯಶೋಧಮ್ಮ, ರೈತಮೋರ್ಚಾ ಅಧ್ಯಕ್ಷ ಬಿಳಿಕೆರೆ ಪ್ರಸನ್ನ, ಉಪಾಧ್ಯಕ್ಷ ರಾಮಚಂದ್ರ, ಕಿರಿಜಾಜಿ ಮಹದೇವ್ ಇತರರು ಹಾಜರಿದ್ದರು.