ಜಿಲ್ಲೆ

ವಿಷ್ಣು ಸಹಸ್ರನಾಮ ಪಠಣದಿಂದ ಪರಿಹಾರ

ಹುಬ್ಬಳ್ಳಿ: ಮಾನವ ಇಂದು ನಾನಾ ಬಗೆಯ ಸಮಸ್ಯೆ, ಅಶಾಂತಿಯನ್ನು ಎದುರಿಸುತ್ತಿದ್ದು ಎಲ್ಲ ಬಗೆಯ ದುಗುಡ ದುಮ್ಮಾನಗಳ ನಿವಾರಣೆಗೆ ವಿಷ್ಣು ಸಹಸ್ರನಾಮದ ಪಠಣ ಒಂದೇ ಪರಿಹಾರ ಎಂದು ಖ್ಯಾತ ವಾಗ್ಮಿ, ವಿದ್ಯಾ ವಾಚಸ್ಪತಿ ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ ಹೇಳಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ ಫೆಡರೇಷನ್ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 36 ಸಾವಿರ ಸ್ವರಾಕ್ಷರ -36 ಸಾವಿರ ವ್ಯಂಜನಾಕ್ಷರ ಸೇರಿ 72 ಸಾವಿರ ಅಕ್ಷರಗಳನ್ನು ವಿಷ್ಣು ಸಹಸ್ರನಾಮ ಒಳಗೊಂಡಿದೆ. ಮನುಷ್ಯನ ಒಟ್ಟು ನಾಡಿಗಳು 72 ಸಾವಿರ. ವಿಷ್ಣು ಸಹಸ್ರನಾಮದ ಪಠಣದಿಂದ ನಮ್ಮ ಎಲ್ಲ ನರ ನಾಡಿಗಳಲ್ಲಿ ಚೈತನ್ಯದಾಯಕವಾದ ವಿಶೇಷ ಶಕ್ತಿ ಸಂಚಾರವಾಗುವುದನ್ನು ನಾವು ಕಂಡುಕೊಳ್ಳುತ್ತೇವೆ ಎಂದರು.

ಸಾನ್ನಿಧ್ಯ ವಹಿಸಿದ್ದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ರಘುವೀರಾನಂದ ಮಹಾರಾಜ ಅವರು ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ ಅವರು ರಚಿಸಿದ ಭಾಗವತ ಗ್ರಂಥವನ್ನು ಲೋಕಾರ್ಪಣೆ ಮಾಡಿ, ಫೆಡರೇಷನ್ ಆಯೋಜಿಸುವ ಎಲ್ಲ ಕಾರ್ಯಗಳಿಗೆ ನಮ್ಮ ಆಶ್ರಮದ ಸಂಪೂರ್ಣ ಸಹಕಾರ ಇರುತ್ತದೆ ಎಂದು ಹೇಳಿದರು.

ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಅಧ್ಯಕ್ಷ ಅನಂತಪದ್ಮನಾಭ ಐತಾಳ, ಹು-ಧಾ ಬಂಟರ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಮಾತನಾಡಿದರು.

ಫೇಡರೇಷನ್​ನ ಹುಬ್ಬಳ್ಳಿ ಶಾಖೆಯ ಅಧ್ಯಕ್ಷ ಡಾ. ಸತ್ಯಮೂರ್ತಿ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೋಟೆಲ್ ಉದ್ಯಮಿ ಕೃಷ್ಣರಾಜ ಕೆಮ್ತೂರ, ಇತರರು ಪಾಲ್ಗೊಂಡಿದ್ದರು. ಸಂಚಾಲಕ ದಯಾನಂದ ರಾವ ನಿರೂಪಿಸಿದರು.