ಕೆ.ಆರ್.ಸಾಗರ: ವಿಶ್ವ ವಿಖ್ಯಾತ ಕೃಷ್ಣರಾಜಸಾಗರ ಅಣೆಕಟ್ಟೆ ನೀರಿನ ಮಟ್ಟ 120 ಅಡಿ ತಲುಪಿ 37 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಕೆ.ಆರ್.ಸಾಗರ ಅಣೆಕಟ್ಟೆಗೆ ಶನಿವಾರ ಭೇಟಿ ನೀಡಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಂದ ಪ್ರವಾಹದ ಮುನ್ಸೂಚನೆ ಕುರಿತು ಮಾಹಿತಿ ಪಡೆದರು.
ನಂತರ ಕಾವೇರಿ ನದಿ ತೀರದ ತಗ್ಗು ಪ್ರದೇಶದಲ್ಲಿರುವ ಬಲಮರಿ, ಎಡಮುರಿ ಪ್ರವಾಸಿ ತಾಣ, ಸರ್ವಧರ್ಮ ಆಶ್ರಮಕ್ಕೆ ಅಧಿಕಾರಿಗಳ ಜತೆ ಭೇಟಿ ನೀಡಿ ಪ್ರವಾಹ ಉಂಟಾದರೆ ಎಚ್ಚರಿಕೆ ತೆಗೆದುಕೊಳ್ಳಬೇಕಾದ ಬಗ್ಗೆ, ಸಿದ್ಧತೆ ಮಾಡಿರುವ ಕುರಿತು ಪರಿಶೀಲನೆ ನಡೆಸಿದರು. ಸ್ಥಳದಲ್ಲಿದ್ದ ಸಾರ್ವಜನಿಕರು ನದಿಗೆ ಇಳಿಯದಂತೆ ಎಚ್ಚರಿಕೆ ನೀಡಿದರು.
ನದಿಯಲ್ಲಿ ಹೆಚ್ಚಿನ ನೀರು ಹರಿಯುತ್ತಿರುವ ಕಾರಣ ಬೆಳಗೊಳ ಬಳಿಯ ಎಡಮುರಿ ಹಾಗೂ ಬಲಮುರಿ ಪ್ರವಾಸಿ ತಾಣಕ್ಕೆ ಪ್ರವಾಸಿಗರು ಆಗಮಿಸದಂತೆ ನಿರ್ಬಂಧಿಸಿಲಾಗಿದ್ದು, ಪ್ರವೇಶ ದ್ವಾರದಲ್ಲಿ ಬ್ಯಾರಿಕೇಡ್ ಸೂಚನಾ ಫಲಕ ಅಳವಡಿಸಲಾಗಿದೆ.
ಬೆಳಗೊಳ ಗ್ರಾಮದ ಕಾವೇರಿ ನದಿ ಮಧ್ಯದಲ್ಲಿರುವ ಸರ್ವಧರ್ಮ ಆಶ್ರಮದಲ್ಲಿದ್ದ ಸುಮಾರು 30 ಕ್ಕೂ ಹೆಚ್ಚು ಭಕ್ತರನ್ನು ಜಿಲ್ಲಾಧಿಕಾರಿ ಸೂಚನೆಯಂತೆ ಸ್ಥಳಾಂತರ ಮಾಡಲಾಯಿತು.
ಜಿಲ್ಲಾಧಿಕಾರಿ ಕುಮಾರ್ ಮಾತನಾಡಿ, ಮುಂದಿನ 5 ರಿಂದ 7 ದಿನಗಳಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುವ ಸಂಭವವಿದ್ದು, ಶೀಘ್ರದಲ್ಲೇ ಕೆ.ಆರ್.ಸಾಗರ ಅಣೆಕಟ್ಟೆ ಗರಿಷ್ಠ ಮಟ್ಟ ತಲುಪಲಿದ್ದು ಮುಂಜಾಗ್ರತ ಕ್ರಮವಾಗಿ ಅಣೆಕಟ್ಟೆಯಿಂದ 15 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿದೆ ಎಂದು ಹೇಳಿದರು.
ಮುಂದೆ 30 ಸಾವಿರದಿಂದ 1 ಲಕ್ಷ ತನಕ ಕ್ಯೂಸೆಕ್ ತನಕ ಹೊರಬಿಡುವ ಸಾಧ್ಯತೆ ಇರುವ ಕಾರಣ ಶ್ರೀರಂಗಪಟ್ಟಣ, ಪಾಂಡವಪುರದ ನದಿ ತೀರದ 72 ಸ್ಥಳಗಳಲ್ಲಿ ನೆರೆ ಪರಿಸ್ಥಿತಿ ಉಂಟಾಗುವುದರಿಂದ ಗ್ರಾ.ಪಂ. ಸೇರಿದಂತೆ ಎಲ್ಲ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಟಾಸ್ಕ್ ಫೋರ್ಸ್ ರಚಿಸಲಾಗಿದೆ ಎಂದು ತಿಳಿಸಿದರು.
ಕೆಆರ್‌ಎಸ್ ತುಂಬುತ್ತಿರುವುದರಿಂದ ಕಾವೇರಿ ಮಾತೆಗೆ ಬಾಗಿನ ಸಮರ್ಪಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದು ಸರ್ಕಾರದ ಮಟ್ಟದಲ್ಲಿ ದಿನಾಂಕ ನಿಗದಿಪಡಿಸಿ ಆಗಸ್ಟ್ ಮೊದಲ ವಾರದಲ್ಲಿ ಬಾಗಿನ ಅರ್ಪಿಸುವ ಸಾಧ್ಯತೆ ಇದೆ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸೀಫ್, ಮಂಡ್ಯ ಎಸ್ಪಿ, ಮಲ್ಲಿಕಾರ್ಜುನ ಬಾಲದಂಡಿ, ತಹಸೀಲ್ದಾರ್ ಪರುಶರಾಮ್ ಸತ್ತಿಗೇರಿ, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಜಯಂತ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಿಶೋರ್ ಕುಮಾರ್, ತಾ.ಪಂ ಇ.ಒ.ವೇಣು, ಡಿವೈಎಸ್‌ಪಿ ಮುರಳಿ, ರಾಜಸ್ವ ನಿರೀಕ್ಷಕ ಬಸವರಾಜು, ಗ್ರಾಮ ಲೆಕ್ಕಿಕ ರಘು ಇದ್ದರು.