ಅಳವಂಡಿ: ಪ್ರತಿಯೊಬ್ಬರೂ ಧಾರ್ಮಿಕ ಕಾರ್ಯಗಳಲ್ಲಿ ಒಗ್ಗಟ್ಟಿನಿಂದ ಪಾಲ್ಗೊಳ್ಳಬೇಕು. ಇವು ಸರ್ವರ ಮನಸ್ಸನ್ನು ಒಗ್ಗೂಡಿಸುತ್ತವೆ ಎಂದು ಶ್ರೀಮರುಳಾರಾಧ್ಯ ಶಿವಾಚಾರ್ಯರು ತಿಳಿಸಿದರು.
ಸಮೀಪದ ಭೈರಾಪುರ ಗ್ರಾಮದಲ್ಲಿ ಶ್ರೀಆಂಜನೇಯಸ್ವಾಮಿಯ ಬೆಳ್ಳಿ ಮೂರ್ತಿಯ ಪ್ರತಿಷ್ಠಾಪನೆ ಅಂಗವಾಗಿ ಆಯೋಜಿಸಿದ್ದ ಮೂರ್ತಿ ಮೆರವಣಿಗೆಗೆ ಚಾಲನೆ ನೀಡಿ ಶನಿವಾರ ಮಾತನಾಡಿದರು.
ಭೈರಾಪುರ ಗ್ರಾಮ ಭಕ್ತಿಯ ಶಕ್ತಿ ಕೇಂದ್ರವಾಗಿದೆ. ಇಲ್ಲಿನ ಭಕ್ತರು ಧಾರ್ಮಿಕ ಕಾರ್ಯದಲ್ಲಿ ತನು, ಮನ, ಧನದಿಂದ ದುಡಿದು ಕಾರ್ಯಕ್ರಮ ಯಶಸ್ವಿಗೊಳಿಸುತ್ತಾರೆ. ಇಂತಹ ಕಾರ್ಯಕ್ರಮಗಳನ್ನು ಮನೆಯ ಕಾರ್ಯಕ್ರಮ ಎಂದು ಭಾವಿಸಿ ಯಶಸ್ವಿಗೊಳಿಸುತ್ತಾರೆ. ಜೀವನದಲ್ಲಿ ಧನ, ಕನಕ, ಆಸ್ತಿ ಗಳಿಸುವುದು ದೊಡ್ಡದಲ್ಲ. ಗಳಿಸಿದ ಹಣದಲ್ಲಿ ಕೆಲ ಭಾಗವನ್ನು ಧಾರ್ಮಿಕ, ಸಾಮಾಜಿಕ ಕಾರ್ಯದಲ್ಲಿ ವಿನಿಯೋಗಿಸಿ ಜೊತೆಗೆ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಮನಃಶಾಂತಿ ಸಿಗಲಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ದೇವಸ್ಥಾನವನ್ನು ತಳಿರು, ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಶ್ರೀ ಆಂಜನೇಯಸ್ವಾಮಿಗೆ ಬೆಳಗ್ಗೆಯಿಂದ ವಿಶೇಷ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿ ಹೂಗಳಿಂದ ಅಲಂಕರಿಸಲಾಗಿತ್ತು. ಬೆಳ್ಳಿಯ ಆಂಜನೇಯ ಮೂರ್ತಿಯನ್ನು ಗ್ರಾಮದ ಶ್ರೀರಾಮ ಮಂದಿರದಿಂದ ಹೂಗಳಿಂದ ಅಲಂಕರಿಸಿದ ಅಡ್ಡಪಲ್ಲಕ್ಕಿಯಲ್ಲಿ ಶ್ರೀ ಆಂಜನೇಯ ಮೂರ್ತಿಯನ್ನು ಮೆರವಣಿಗೆ ಮಹಿಳೆಯರ ಕಳಸ, ಹಾಗೂ ವಾದ್ಯ ಮೇಳದೊಂದಿಗೆ ಗ್ರಾಮದ ಮುಖ್ಯ ಬೀದಿಗಳಲ್ಲಿ ಅದ್ದೂರಿಯಿಂದ ನಡೆಸಲಾಯಿತು. ಮೆರವಣಿಗೆ ದೇವಸ್ಥಾನ ತಲುಪಿದ ನಂತರ ಮೂರ್ತಿ ಪೂಜೆ ಹಾಗೂ ಪ್ರತಿಷ್ಠಾಪನೆ ನಡೆಯಿತು. ನಂತರ ಅನ್ನ ದಾಸೋಹ ಸೇವೆ ನಡೆಯಿತು.
ಪ್ರಮುಖರಾದ ನಿಂಗಪ್ಪ ಮೇಟಿ, ವೀರಯ್ಯ ಸಿಂದೋಗಿ, ವೆಂಕಟೇಶ ಬ್ಯಾಡಗಿ, ಪರಶುರಾಮ, ಮೈಲಾರಪ್ಪ, ಕಾಶಯ್ಯ, ದೇವರಡ್ಡಿ ಪರಸಪ್ಪ, ಯಲ್ಲಪ್ಪ, ಲಕ್ಷ್ಮಣ, ಗಿಡ್ಡಪ್ಪ, ಮಹೇಶ, ಬಸವರಾಜ, ದೇವಪ್ಪ, ಗಂಗಪ್ಪ, ಪಕೀರಸಾಬ, ಷರೀಪ, ಸುರೇಶ, ಹನುಮಂತಪ್ಪ, ಹನುಮಪ್ಪ, ಮಲ್ಲಪ್ಪ, ಮಹಾಂತೇಶ, ಶರಣಪ್ಪ, ನಿಂಗಪ್ಪ, ಭೀಮಪ್ಪ, ಬಸಯ್ಯ, ಶರಣಪ್ಪ, ಬಸವರಾಜ, ಮೈಲಾರಪ್ಪ, ಕೊಟೇಪ್ಪ, ಕಾಶಪ್ಪ ಪಕೀರಪ್ಪ ಭರಮಪ್ಪ ಇತರರು ಇದ್ದರು.