ಶಿವರಾತ್ರಿ ಪ್ರಯುಕ್ತ ಕುಪ್ಪಳ್ಳಿ ಗ್ರಾಮದ ಮಲೈ ಮಹದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಅನ್ನದಾಸೋಹ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 
ಜಿಲ್ಲೆ

ಧಾರ್ಮಿಕ ಆಚರಣೆಗಳಿಂದ ಸಾಮರಸ್ಯ ಸಾಧ್ಯ

ಲೋಕೇಶ್ ಮನು. ಡಿ

ಸಾಲಿಗ್ರಾಮ: ಗ್ರಾಮಗಳಲ್ಲಿ ಹಬ್ಬ, ಜಾತ್ರೆಯಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದರಿಂದ ಸಾಮರಸ್ಯದ ಬದುಕು ನಡೆಸಬಹುದು ಎಂದು ಮಹದೇಶ್ವರ ದೇವಸ್ಥಾನದ ಮುಖ್ಯ ಅರ್ಚಕ ಮಹದೇವ ಶೆಟ್ಟಿ ಅಭಿಪ್ರಾಯಪಟ್ಟರು.

ಕುಪ್ಪಳ್ಳಿ ಗ್ರಾಮದಲ್ಲಿರುವ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನದ 13ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಪೂಜೆ ಮತ್ತು ಅನ್ನ ದಾಸೋಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನುಷ್ಯ ನಿತ್ಯ ಜಂಜಾಟದ ನಡುವೆ ದೇವಸ್ಥಾನದ ಬಳಿ ಬಂದು ಒಂದಷ್ಟು ಕಾಲ ಕಳೆಯುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ ಎಂದರು.

ದಿನೇದಿನೆ ದೇವಸ್ಥಾನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಭಕ್ತರಿಗೆ ಅನುಕೂಲವಾಗುವ ರೀತಿಯಲ್ಲಿ ಮೂಲ ಸೌಕರ್ಯ ಒದಗಿಸಿಕೊಡಲಾಗುತ್ತಿದೆ. ಪ್ರತಿ ಸೋಮವಾರ ಮತ್ತು ಶುಕ್ರವಾರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆಯಲಿದೆ ಎಂದರು.

ಅನ್ನದಾಸೋಹ ಕಾರ್ಯಕ್ರಮಕ್ಕೆ ತಂದ್ರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ವೆಂಕಟೇಶ ನಾಯಕ ಚಾಲನೆ ನೀಡಿ ಮಾತನಾಡಿ, ಜಾತಿ ಮತ್ತು ರಾಜಕೀಯ ಪಕ್ಷಗಳನ್ನು ಹೊರಗಿಟ್ಟು ಗ್ರಾಮಗಳಲ್ಲಿ ಧಾರ್ಮಿಕ ಕಾರ್ಯ ನಡೆಸುವುದರಿಂದ ಪ್ರೀತಿ, ಸ್ನೇಹ ವೃದ್ಧಿಸಲಿದೆ ಎಂದರು.

ಅಕ್ಕ ಪಕ್ಕದ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಕುಟುಂಬ ಸಮೇತ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಗ್ರಾಮ ಪಂಚಾಯಿತಿ ಸದಸ್ಯರಾದ ಸುನಿತಾ ಸ್ವಾಮಿ, ಅನಿತಾ ಕೀರ್ತಿ, ಲಕ್ಷ್ಮೀ ಮಹದೇವಶೆಟ್ಟಿ ಇತರರಿದ್ದರು.