ಕಾರಟಗಿ: ಶಿವಮೊಗ್ಗ ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಖಂಡಿಸಿ ಹಿಂದು ಜಾಗರಣ ವೇದಿಕೆ ತಾಲೂಕು ಘಟಕದಿಂದ ಶನಿವಾರ ಪಟ್ಟಣದ ಕನಕದಾಸ ವೃತ್ತದಿಂದ ತಹಸಿಲ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಹಿಂಜಾವೇ ಉತ್ತರ ಪ್ರಾಂತ ಪ್ರಮುಖ ಶ್ರೀಕಾಂತ ಹೊಸಕೇರಾ ಮಾತನಾಡಿ, ಕರ್ನಾಟಕದಲ್ಲಿ ಏಳು ವರ್ಷಗಳಲ್ಲಿ 30ಕ್ಕೂ ಅಧಿಕ ಹಿಂದು ಪರ ಸಂಘಟನೆಗಳ ಕಾರ್ಯಕರ್ತರ ಕೊಲೆಯಾಗಿದೆ. ಹಿಜಾಬ್ ವಿಷಯದಲ್ಲೂ ಮೂಲಭೂತವಾದಿ ಸಂಘಟನೆಗಳಾದ ಎಸ್‌ಡಿಪಿಐ, ಸಿಎಫ್‌ಐ, ಪಿಎಫ್‌ಐ ಹಾಗೂ ಎಂಐಎಂಗಳನ್ನು ಅಮಾನುಷವಾಗಿ ನಡೆದುಕೊಳ್ಳುತ್ತಿದ್ದು, ಕೂಡಲೇ ನಿಷೇಧಿಸಬೇಕು ಎಂದು ಆಗ್ರಹಿಸಿದರು.
ಭಾರತದಲ್ಲಿ ಮೂಲಭೂತವಾದಿ ಸಂಘಟನೆಗಳು ತಮ್ಮದೇ ಕಾನೂನು ತರಬೇಕೆನ್ನುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದು, ನಾವು ಬಿಡುವುದಿಲ್ಲ. ಇದಕ್ಕಾಗಿ ಯುವಕರು ಒಗ್ಗೂಡಬೇಕು. ರಾಜ್ಯ ಸರ್ಕಾರ ಕೂಡಲೇ ತಲೆಮರೆಸಿಕೊಂಡ ಕೊಲೆಗಾರರನ್ನು ಪತ್ತೆ ಹಚ್ಚಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಆರ್‌ಎಸ್‌ಎಸ್ ಕಾರ್ಯಕರ್ತ ರವಿ ತಿಮ್ಮಾಪುರ ಮಾತನಾಡಿ, ಹಿಂದುಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಪ್ರತಾಪ್ ಸಿಂಹ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಸೇರಿ ಅನೇಕರು ಮಾಧ್ಯಮಗಳಲ್ಲಿ ಹೇಳಿಕೆ ನೀಡುವ ಬದಲು ತಮ್ಮ ಸ್ಥಾನಕ್ಕೆ ರಾಜೀನಾಮೆಕೊಟ್ಟು ಹಿಂದು ಸಂಘಟನೆಗಳ ಜತೆಗೂಡಿ ಹೋರಾಟದಲ್ಲಿ ತೊಡಬೇಕು ಎಂದರು. ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಶಾಸಕ ಬಸವರಾಜ ದಢೇಸುಗೂರು, ಪುರಸಭೆ ಮಾಜಿ ಸದಸ್ಯ ಸಿದ್ರಾಮಯ್ಯಸ್ವಾಮಿ ಹಿರೇಮಠ, ಪ್ರಮುಖರಾದ ಲಂಕೇಶ ಗುಳದಾಳ, ಜಗದೀಶಪ್ಪ ಹಿರೇಮನಿ, ಹಿಂಜಾವೇ ಕಾರ್ಯಕರ್ತರಾದ ಹನುಮಂತರೆಡ್ಡಿ ಗುಡೂರು, ಮಂಜುನಾಥ ಮಸ್ಕಿ, ರಾಜುಗೌಡ ಮಾಲಿಪಾಟೀಲ್, ವಿಕಾಸ್ ಇಟಗಿ, ಶಿವು ಮೈಲಾಪುರ, ಅಮರೇಗೌಡ ಮಾಲಿಪಾಟೀಲ್, ನರೇಶರೆಡ್ಡಿ, ಶರಣಬಸವ ಬರಗೂರು, ಅನಿಲ್, ವಿನಯ್ ಬಿಚ್ಚಾಲಿ, ಶಶಿ ಮೇದಾರ, ಅಯ್ಯನಗೌಡ ಇತರರಿದ್ದರು.