ಜಿಲ್ಲೆ

ರಥೋತ್ಸವದಿಂದ ಧರ್ಮ ಪ್ರಭಾವ : ಚಾರುಕೀರ್ತಿಭಟ್ಟಾರಕ ಸ್ವಾಮೀಜಿ ಶುಭನುಡಿ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಜೈನಧರ್ಮದ ತಿರುಳಾದ ಸಮ್ಯಕ್‌ದರ್ಶನ, ಸಮ್ಯಕ್‌ಜ್ಞಾನ, ಸಮ್ಯಕ್‌ಚಾರಿತ್ರೃದ ಪ್ರತೀಕವಾದ ರಥಯಾತ್ರಾ ಮಹೋತ್ಸವದಲ್ಲಿ ಭಾಗವಹಿಸುವುದರಿಂದ ದೇವರ ಅನುಗ್ರಹ ಪ್ರಾಪ್ತಿಯೊಂದಿಗೆ ಧರ್ಮ ಪ್ರಭಾವನೆಯಾಗುತ್ತದೆ ಎಂದು ಮೂಡುಬಿದಿರೆ ಜೈನಮಠದ ಪೂಜ್ಯ ಚಾರುಕೀರ್ತಿಭಟ್ಟಾರಕ ಸ್ವಾಮೀಜಿ ಹೇಳಿದರು.

ವೇಣೂರಿನ ಬಾಹುಬಲಿ ಬೆಟ್ಟದಲ್ಲಿ ರಥಯಾತ್ರಾ ಮಹೋತ್ಸವ ಸಂದರ್ಭದಲ್ಲಿ ಆಯೋಜಿಸಿದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಎಲ್ಲರೂ ರಥಯಾತ್ರೆಯಂತಹ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಣ್ಯ ಸಂಚಯ ಮಾಡಿಕೊಳ್ಳಬೇಕು ಎಂದರು.

ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಯಾತ್ರಿ ನಿವಾಸದಲ್ಲಿ ಸ್ವಾಧ್ಯಾಯ ಕೇಂದ್ರದಲ್ಲಿ ಶ್ರುತಭಂಡಾರ ಉದ್ಘಾಟಿಸಿ ಮಾತನಾಡಿ, ಸ್ವಾಧ್ಯಾಯದಿಂದ ಆತ್ಮಕಲ್ಯಾಣದೊಂದಿಗೆ ಪುಣ್ಯಸಂಚಯವಾಗುತ್ತದೆ ಎಂದರು. ವೇಣೂರು ತೀರ್ಥಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ತರಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಅಳದಂಗಡಿ ಅರಮನೆ ತಿಮ್ಮಣ್ಣರಸ ಡಾ.ಪದ್ಮಪ್ರಸಾದ ಅಜಿಲ ಅಧ್ಯಕ್ಷತೆ ವಹಿಸಿದರು. ಹಿರಿಯ ಶ್ರಾವಕರಾದ ಗುಣವತಿ ಪಿ.ಎ.ಆಳ್ವ, ಜಗತ್ಪಾಲ ಮುದ್ಯ, ಕತ್ತೋಡಿ, ಗುಣವತಿ ಅಮ್ಮ ಬರಮೇಲು ಅವರನ್ನು ಗೌರವಿಸಲಾಯಿತು. ಉನ್ನತ ಸಾಧನೆ ಮಾಡಿದ ಪಾರ್ಶ್ವನಾಥ ಜೈನ್ ನೇರೆಂಕಿ ಅವರನ್ನು ಸನ್ಮಾನಿಸಲಾಯಿತು. ಕೋಶಾಧಿಕಾರಿ ಪಿ.ಜಯರಾಜ ಕಂಬಳಿ ಉಪಸ್ಥಿತರಿದ್ದರು. ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ಪ್ರವೀಣ ಕುಮಾರ್ ಇಂದ್ರ ಸ್ವಾಗತಿಸಿದರು. ಮೂಡುಕೋಡಿ ಗುತ್ತು ಮಹಾವೀರ ಜೈನ್ ವಂದಿಸಿದರು. ಭಗವಾನ್ ಬಾಹುಬಲಿ ಸ್ವಾಮಿಗೆ 24 ಕಲಶಗಳಿಂದ ಪಾದಾಭಿಷೇಕದ ಬಳಿಕ ರಥಯಾತ್ರಾ ಮಹೋತ್ಸವ ನಡೆಯಿತು.