ಜಿಲ್ಲೆ

ಎಳವೆಯಲ್ಲೇ ಸನಾತನ ಧರ್ಮ ಬೋಧನೆ : ಕೆ.ಪಿ.ಶಶಿಕಲಾ ಹೇಳಿಕೆ

ಕಾಸರಗೋಡು: ಸನಾತನ ಧರ್ಮದ ಸಾರವನ್ನು ಎಳವೆಯಲ್ಲೇ ಮಕ್ಕಳಿಗೆ ಬೋಧಿಸುವ ಕೆಲಸ ಹೆತ್ತವರಿಂದ ನಡೆಯಬೇಕು ಎಂದು ಹಿಂದು ಐಕ್ಯವೇದಿ ರಾಜ್ಯ ಮುಖ್ಯಾಧಿಕಾರಿ ಕೆ.ಪಿ.ಶಶಿಕಲಾ ಹೇಳಿದರು.

ಕಾಸರಗೋಡು ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಠಾರದಲ್ಲಿ ನಡೆಯುತ್ತಿರುವ 70ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ‘ಸಪ್ತತಿ ಮಹೋತ್ಸವ’ ಅಂಗವಾಗಿ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.

ಕೇರಳದಲ್ಲಿ ಸನಾತನ ಧರ್ಮವನ್ನು ಹಾನಿಗೊಳಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಾ ಬರುತ್ತಿದೆ. ಹಿಂದು ಸಂಸ್ಕೃತಿ ಮೇಲಿನ ದಬ್ಬಾಳಿಕೆ ಬಗ್ಗೆ ಸರ್ಕಾರ ಮೌನ ವಹಿಸುತ್ತಿದೆ. ಗುರುವಾಯೂರು ಕ್ಷೇತ್ರ, ಶಬರಿಮಲೆ ದೇಗುಲ ವಿಚಾರದಲ್ಲಿ ಇಂತಹ ಸಂಚು ನಡೆದು ಬರುತ್ತಿದೆ. ಶಬರಿಮಲೆಯ ಪಂಪಾದಲ್ಲಿ ಜಾಗತಿಕ ಅಯ್ಯಪ್ಪ ಸಂಗಮ ಆಯೋಜಿಸುತ್ತಿರುವುದರ ಹಿಂದೆ ನಿಗೂಢತೆ ಅಡಗಿದೆ. ಇದಕ್ಕೆ ಜಾಗೃತ ಹಿಂದು ಸಮಾಜ ಅವಕಾಶ ನೀಡಬಾರದು ಎಂದರು.

ಸಪ್ತತಿ ಮಹೋತ್ಸವದ ರಕ್ಷಾಧಿಕಾರಿ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು. ಉಳಿಯತ್ತಾಯ ವಿಷ್ಣು ಆಸ್ರ ಅನುಗ್ರಹ ಭಾಷಣ ಮಾಡಿದರು. ಪ್ರಮುಖರಾದ ಕೆ.ಆರ್.ಮನೋಜ್ ಕುಮಾರ್, ವಕೀಲ ಎಂ.ನಾರಾಯಣ ಭಟ್ ಮೊದಲಾದವರು ಉಪಸ್ಥಿತರಿದ್ದರು.

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಆ.27ರಂದು ಗಣಪತಿ ವಿಗ್ರಹ ಪ್ರತಿಷ್ಠಾಪನೆಯೊಂದಿಗೆ ಗಣೇಶೋತ್ಸವ ಆರಂಭಗೊಂಡಿದ್ದು, ಸೆ.6ರವರೆಗೆ ಜರುಗಲಿದೆ.