ಶಿಗ್ಗಾಂವಿ: ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ಬೋಧಿಸುವಂತಹ ಧರ್ಮ ಸಭೆಗಳು ಹೆಚ್ಚು ನಡೆಯುವುದರಿಂದ ಮನುಕುಲ ಏಳಿಗೆ ಸಾಧ್ಯ ಎಂದು ಗಂಜಿಗಟ್ಟಿ ಶ್ರೀ ಚರಮೂರ್ತೆಶ್ವರ ಮಠದ ವೈಜೀನಾಥ ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಮೈಲಾರಲಿಂಗೇಶ್ವರ ನೂತನ ಶೀಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ನೂತನ ದೇವಸ್ಥಾನ ಲೋಕಾರ್ಪಣೆ ಅಂಗವಾಗಿ ಗುರುವಾರ ಆಯೋಜಿಸಿದ್ದ ಧರ್ಮ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ‘ಇಂದಿನ ಜನಮಾನಸದಲ್ಲಿ ಭಕ್ತಿ ಮಾರ್ಗ ಕಡಿಮೆಯಾಗುತ್ತಿವೆ. ಮಠ-ಮಂದಿರಗಳು ನಮ್ಮ ಸಂಸ್ಕೃತಿ, ಧರ್ಮ ಬೋಧನೆ ನೀಡುವ ಕೇಂದ್ರಗಳಾಗಿದ್ದು, ನಿರಂತರವಾಗಿ ಇಂತಹ ಧರ್ಮ ಸಭೆಗಳನ್ನು ನಡೆಸುವ ಮೂಲಕ ಮಾನವ ಕುಲ ಉದ್ಧಾರಕ್ಕಾಗಿ ಎಲ್ಲರೂ ತೊಡಗಿಕೊಳ್ಳಬೇಕು ಎಂದು ಹೇಳಿದರು.
ಕೆಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಗಂಗಣ್ಣ ಸಾತಣ್ಣನವರ ಮಾತನಾಡಿ, ಇಂದಿನ ನಮ್ಮ ಯುವ ಪೀಳಿಗೆಗೆ ನಮ್ಮ ಧರ್ವಚರಣೆ, ಸಂಸ್ಕಾರಯುತ ಜೀವನದಿಂದ ದೂರಾಗುತ್ತಿದ್ದು, ಜಾತ್ರೆ, ದೇವಸ್ಥಾನಗಳಲ್ಲಿ ನಡೆಯುವ ಧರ್ಮ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ನಮ್ಮ ಸಂಸ್ಕೃತಿ, ಧರ್ಮದ ಅರಿವು ಮೂಡಲು ಸಾಧ್ಯ ಎಂದು ಹೇಳಿದರು.
ಕುರುಬ ಸಮಾಜದ ಮುಖಂಡ ಫಕೀರಪ್ಪ ಕುಂದೂರ ಮಾತನಾಡಿ, ದೇವಸ್ಥಾನಗಳಲ್ಲಿ ನಡೆಯುವ ಪುಣ್ಯದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದರು.
ಮೈಲಾರಲಿಂಗೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಸುಭಾಸ ಚೌಹಾಣ ಅಧ್ಯಕ್ಷತೆ ವಹಿಸಿದ್ದರು. ಗೊರವಯ್ಯ, ರಾಮಪ್ಪಜ್ಜ ಕಾರ್ಣಿಕದ, ಲಕ್ಷೆ್ಮೕಶ್ವರದ ರಮೇಶ ಸ್ವಾಮೀಜಿ, ಬಸವರಾಜ ಹೆಸರೂರ, ಡಾ. ಲಕ್ಷ್ಮಣ ನಾಯk, ಶಿವಾನಂದ ಗಾಣಗೇರ, ಶಿವಪ್ರಸಾದ ಸುರಗಿಮಠ, ಸಿ.ವಿ. ಮತ್ತಿಗಟ್ಟಿ, ಪುಟ್ಟಪ್ಪ ಕುಂದಗೋಳ, ಪರಮೇಶ ಲಮಾಣಿ, ವಿಶ್ವನಾಥ ಹರವಿ, ಪರಶುರಾಮ ಕುದರಿ, ಇತರರಿದ್ದರು.
ವಿವಿಧ ರಂಗದಲ್ಲಿ ಸೇವೆ ಸಲ್ಲಿಸಿದ ಸಾಧಕರು ಹಾಗೂ ಸೇವಾಧಾರಿಗಳನ್ನು ದೇವಸ್ಥಾನ ಸೇವಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಸ್ವರ ಸಿಂಚನ ಕಲಾ ತಂಡದಿಂದ ಜಾನಪದ ಗೀತ ಗಾಯನ, ಸುಜನಿ ನಾಟ್ಯ ಶಾಲೆ ವಿದ್ಯಾರ್ಥಿಗಳಿಂದ ನಡೆದ ಭರತನಾಟ್ಯ, ಮನರಂಜನಾ ಕಾರ್ಯಕ್ರಮ ಜನ ಮನ ರಂಜಿಸಿತು. ಮಂಜುನಾಥ ದುಭೆ ಹಾಗೂ ಶಶಿಕಾಂತ ರಾಠೋಡ ತಂಡ ಕಾರ್ಯಕ್ರಮ ನಿರ್ವಹಿಸಿದರು.