ಬಂಡಿಗಣಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿಯವರನ್ನು ಸನ್ಮಾನಿಸಲಾಯಿತು. ದಾನೇಶ್ವರ ಶ್ರೀಗಳು, ಶಾಸಕ ಸಿದ್ದು ಸವದಿ ಇದ್ದರು. 
ಜಿಲ್ಲೆ

ಮಠಗಳಿಂದ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ನ್ಯಾಯ

Vijayapura - Desk - Gurappa Lokuri

ರಬಕವಿ/ ಬನಹಟ್ಟಿ: ರಾಜ್ಯದ ಹಲವಾರು ಮಠ-ಮಾನ್ಯಗಳ ಆಚಾರ-ವಿಚಾರ ತಿಳಿಯುವ ಪ್ರಯತ್ನ ಮಾಡುತ್ತಿರುವ ನನಗೆ ಬಂಡಿಗಣಿ ಮಠವು ವಿಶೇಷ ಅನುಭವ ನೀಡುವಲ್ಲಿ ಕಾರಣವಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ತಾಲೂಕಿನ ಬಂಡಿಗಣಿಯ ನೀಲಮಾಣಿಕ ಬಸವಗೋಪಾಲಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವೆಂಕಟೇಶ್ವರ ನೈವೇದ್ಯ ಹಾಗೂ ಪದ್ಮಾವತಿದೇವಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳೆಯರೇ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಭಕ್ತಿ ಮೆರೆಯುತ್ತಿರುವುದು ವಿಶೇಷ. ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಮಠವು ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆ ತರುವಂಥದ್ದು. 12ನೇ ಶತಮಾನದ ಬಸವಣ್ಣನವರ ಬೆಂಬಲಕ್ಕೆ ನಿಂತು ಅವರ ತಳಹದಿಯಲ್ಲೇ ಮಠ ಮುನ್ನೆಡೆಸಿಕೊಂಡು ಹೋಗುತ್ತಿರುವುದು ಸಂತಸ ತಂದಿದೆ. ಗೋಕಾಕ ತಾಲೂಕಿನ ದುರದುಂಡಿಯಲ್ಲಿ ಶೈಕ್ಷಣಿಕದೊಂದಿಗೆ ಹೈನುಗಾರಿಕೆಯಲ್ಲಿ ಕ್ರಾಂತಿ ಮಾಡುವ ಮೂಲಕ ಸಮಾಜ ತಿದ್ದುವ ಕಾರ್ಯದಲ್ಲಿ ತೊಡಗಿರುವುದು ಮೆಚ್ಚುವಂಥದ್ದು ಎಂದು ಶ್ರೀಮಠದ ರುವಾರಿ ಅನ್ನದಾನೇಶ್ವರರನ್ನು ಪ್ರಶಂಸಿದರು.

ಅನ್ನದಾನೇಶ್ವರರು ಸಾನ್ನಿಧ್ಯ ವಹಿಸಿ ಮಾತನಾಡಿ, ಸದಾ ರಾಜ್ಯದಲ್ಲಿ ಅಕ್ಷರಸ್ಥರ ಸಂಖ್ಯೆ ಹೆಚ್ಚಾಗಲು ಮಠಗಳು ಕಾರಣ. ಧಾರ್ಮಿಕ ಪ್ರಜ್ಞೆ, ಅನ್ನದಾಸೋಹ, ವಸತಿ ವ್ಯವಸ್ಥೆ ಕಲ್ಪಿಸುವುದೇ ಬಂಡಿಗಣಿ ಮಠದ ಪರಂಪರೆಯಾಗಿದೆ ಎಂದು ತಿಳಿಸಿದರಲ್ಲದೆ, ಮಕ್ಕಳಿಗೆ ಉತ್ತಮ ಸಂಸ್ಕಾರ, ಜನರ ಕಲ್ಯಾಣಕ್ಕಾಗಿ ಮಠ ಮಾನ್ಯಗಳ ಕಾರ್ಯ ದೊಡ್ಡದಾಗಿದೆ ಎಂದು ತಿಳಿಸಿದರು.

ಶಾಸಕ ಸಿದ್ದು ಸವದಿ ಮಾತನಾಡಿ, ರಬಕವಿ-ಬನಹಟ್ಟಿ ತಾಲೂಕಿಗೆ ಮಠಗಳ ಇತಿಹಾಸ, ಪರಂಪರೆಯಿದೆ. ಧರ್ಮದಿಂದ ಸಾಮಾಜಿಕ ಜಾಗೃತಿ ಮೂಡುತ್ತಿದ್ದು, ಇದು ಹೆಚ್ಚಾಗಿ ಸ್ವಾಮೀಜಿಗಳಿಂದ ಸಾಧ್ಯವಾಗುತ್ತಿದೆ ಎಂದರು.

ಸವದತ್ತಿ ಶಾಸಕ ವಿಶ್ವಾಸ ವೈದ್ಯ, ತೇರದಾಳ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ, ಸುಶೀಲಕುಮಾರ ಬೆಳಗಲಿ, ಮಲ್ಲಪ್ಪ ಸಿಂಗಾಡಿ, ರಂಗನಗೌಡ ಪಾಟೀಲ, ಸುರೇಶಗೌಡ ಪಾಟೀಲ ಇತರರಿದ್ದರು.