ವಿಜಯವಾಣಿ ಸುದ್ದಿಜಾಲ ಬೈಂದೂರು
ನಮ್ಮ ಸಂಸ್ಕೃತಿ ಬಿಂಬಿಸುವ ಯಕ್ಷಗಾನದ ಪುರಾಣ ಕತೆಗಳ ಮೂಲಕ ಈಗಿನ ಯುವ ಪೀಳಿಗೆ ಧಾರ್ಮಿಕ ಶಿಕ್ಷಣ ನೀಡುವ ಮೂಲಕ ಜೀವನದ ಸಾರ್ಥಕತೆ ಪಡೆಯಬೇಕು ಎಂದು ಉದ್ಯಮಿ ಬೆಳ್ವೆ ಗಣೇಶ ಕಿಣಿ ಹೇಳಿದರು.
ನಾಗೂರು ಒಡೆಯರಮಠ ಶ್ರೀ ಗೋಪಾಲಕೃಷ್ಣ ಕಲಾಮಂದಿರದಲ್ಲಿ ಕಿರಿಮಂಜೇಶ್ವರ ಧಾರೇಶ್ವರ ಯಕ್ಷಬಳಗ ಚಾರಿಟೆಬಲ್ ಟ್ರಸ್ಟ್ ಆಶ್ರಯದಲ್ಲಿ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಸಹಕಾರದಲ್ಲಿ ಶನಿವಾರ 9ನೇ ವರ್ಷದ ಯಕ್ಷಗಾನ ಜ್ಞಾನಯಜ್ಞ ತಾಳಮದ್ದಳೆ ಸಪ್ತಾಹ ಹಾಗೂ ತೆಕ್ಕಟ್ಟೆ ಆನಂದ ಮಾಸ್ತರರ ಸ್ಮರಣೆಯ ಕಲಾತಪಸ್ವಿ-2024ರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಿರಿಮಂಜೇಶ್ವರ ಶ್ರೀ ಅಗಶ್ವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ ಐತಾಳ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಅರ್ಥಧಾರಿ ಉಜಿರೆ ಅಶೋಕ ಭಟ್, ಟಿ.ಸುನಂದಾ ನಾಗೂರು ಇದ್ದರು. ಕಾರ್ತಿಕ್ ಧಾರೇಶ್ವರ್ ಸ್ವಾಗತಿಸಿದರು. ಗೋವಿಂದ ಎಂ. ನಿರೂಪಿಸಿದರು. ಬಳಿಕ ಜಿ.ರಾಘವೇಂದ್ರ ಮಯ್ಯ ಹಾಲಾಡಿ, ರಾಘವೇಂದ್ರ ಹೆಗಡೆ, ರಾಮಕೃಷ್ಣ ಮಂದಾರ್ತಿ, ಉಜಿರೆ ಅಶೋಕ ಭಟ್, ಮುರೂರು ರಮೇಶ ಭಂಡಾರಿ, ಸಂಕದಗುಂಡಿ ಗಣಪತಿ ಭಟ್, ಹರೀಶ ಬೊಳಂತಿಮೊಗರು, ಮೂಡುಬಗೆ ಸತೀಶ ಶೆಟ್ಟಿ ಒಳಗೊಂಡ ಕೃಷ್ಣಾರ್ಜುನ ತಾಳಮದ್ದಳೆ ಜರುಗಿತು.
ಕಲಾಪೋಷಕರು ಹಾಗೂ ಪ್ರೇಕ್ಷಕರು ಕಲೆ ಮತ್ತು ಕಲಾವಿದರ ಹಿಂದಿರುವ ದೊಡ್ಡಶಕ್ತಿ. ಸಾಂಸ್ಕೃತಿಕ ಅಭಿರುಚಿ, ಅಭಿಮಾನ ಹಾಗೂ ಹಿರಿಯರ ಸನ್ನಡತೆಯ ಸಹಕಾರದಿಂದ ಸತತ ಎಂಟು ವರ್ಷಗಳಿಂದ ಆಚರಿಸುತ್ತಾ ಬಂದಿರುವ ಯಕ್ಷಗಾನ ತಾಳಮದ್ದಳೆ ಸಪ್ತಾಹ ಪರಿಸರದ ಕಲಾಸಕ್ತರ ಮನಮುಟ್ಟುವಲ್ಲಿ ಯಶಸ್ಸು ಕಂಡಿರುವುದು ಕಲಾಕೃಷಿಯ ಸಾರ್ಥಕತೆ ಬಿಂಬಿಸುತ್ತದೆ. -ಪ್ರಮೋದ್ ಮಧ್ವರಾಜ್ ಮಾಜಿ ಸಚಿವ https://www.vijayavani.net/farmers-voice-mill-owners-negotiation-failed https://www.vijayavani.net/ashirvachan-of-pejawara-at-bynduru-utsavam