ಹುಣಸೂರು: ಧಾರ್ಮಿಕ ಶ್ರದ್ಧೆ ಮನುಷ್ಯನಲ್ಲಿ ಶಿಸ್ತು, ಸಂಯಮ ಮತ್ತು ಉತ್ತಮ ನಡತೆಯನ್ನು ಕಲಿಸುತ್ತದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.
ಪಟ್ಟಣದ ಪೌರಕಾರ್ಮಿಕ ಕಾಲನಿಯ ಶ್ರೀ ಆದಿಶಕ್ತಿ ಮಹಾಕಾಳಿ ದೇವಾಲಯದ 106ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಶನಿವಾರ ಪಾಲ್ಗೊಂಡು ಶ್ರೀದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾತನಾಡಿ, ದೇವರು, ಧರ್ಮ ಎನ್ನುವುದು ದೇವರ ಮೇಲಿನ ನಂಬಿಕೆ ಮಾತ್ರವಲ್ಲ, ಆ ಮೂಲಕ ನಮ್ಮ ಬದುಕನ್ನು ಹಸನುಗೊಳಿಸಿಕೊಳ್ಳಲು ಇರುವ ದಾರಿ ಎಂದು ಹೇಳಿದರು.
ಧಾರ್ಮಿಕ ಶ್ರದ್ಧೆ ಯಾರೊಬ್ಬರನ್ನೂ ನೋಯಿಸಬಾರದು. ಪೂಜೆ, ಪುನಸ್ಕಾರಗಳು ನಮ್ಮ ಜೀವನದ ಶೈಲಿಯನ್ನೇ ಬದಲಿಸಬಲ್ಲವು. ಅಂತರಂಗ ಮತ್ತು ಬಹಿರಂಗ ಶುದ್ಧಿಗೆ ಧಾರ್ಮಿಕ ಆಚರಣೆಗಳು ಅಗತ್ಯವಾಗಿದೆ. ಈ ದೇವಸ್ಥಾನದ ಜೀರ್ಣೋದ್ಧಾರವು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರಿಂದ ಆಗಿದ್ದು, ಶ್ರೀಗಳ ಸಂಪೂರ್ಣ ಆಶೀರ್ವಾದದೊಂದಿಗೆ ದೇಗುಲ ಪುಣ್ಯಗುಡಿಯಾಗಿದೆ. ಪೌರಕಾರ್ಮಿಕರು ನಮ್ಮೆಲ್ಲರ ಆರೋಗ್ಯವನ್ನು ಕಾಪಾಡುವವರು. ಅವರ ನೋವು, ನಲಿವುಗಳಿಗೆ ಸರ್ಕಾರಗಳು ಸ್ಪಂದಿಸುವಂತಾಗಬೇಕು ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ಗಣೇಶ್ ಕುಮಾರ್ ಸ್ವಾಮಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಟಿ.ಡಿ.ನಾರಾಯಣ್, ಪ್ರಧಾನ ಕಾರ್ಯದರ್ಶಿ ಆರ್.ವೆಂಕಟೇಶ, ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ರವಿಶಂಕರ್, ಯುವ ಮೋರ್ಚಾ ಅಧ್ಯಕ್ಷ ರಾಘವೇಂದ್ರ. ಬಿಜೆಪಿ ಮುಖಂಡ ಅಶೋಕ್, ವಾರ್ಡ್ ಸದಸ್ಯೆ ರಾಣಿ ಪೆರುಮಾಳ್, ಸುರೇಶ್, ಬನ್ನಾರಿ ಇತರರು ಇದ್ದರು.