ಜಿಲ್ಲೆ

ಧಾರ್ಮಿಕ ಕಾರ್ಯಕ್ರಮದಿಂದ ಜೀವನದಲ್ಲಿ ನೆಮ್ಮದಿ

ಚನ್ನಗಿರಿ: ನಿರಂತರ ಧಾರ್ಮಿಕ ಕಾರ್ಯಕ್ರಮಗಳಿಂದ ಜೀವನದಲ್ಲಿ ನೆಮ್ಮದಿ, ಶಾಂತಿ ಪಡೆಯಲು ಸಾಧ್ಯ ಎಂದು ಶಾಸಕ ಶಿವಗಂಗಾ ಬಸವರಾಜ್ ತಿಳಿಸಿದರು.

ತಾಲೂಕಿನ ಕಾಕನೂರು ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧ್ದಿ ಯೋಜನೆ, ಹಿರೇಕೋಗಲೂರು ವಲಯದ ಪ್ರಗತಿಬಂಧು-ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಕಾಕನೂರು ವಿಶ್ವಗುರು ಬಸವೇಶ್ವರ ಸಮುದಾಯದ ಸಹಯೋಗದಲ್ಲಿ ಏರ್ಪಡಿಸಿದ್ದ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.

ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಎಂಟು ಫಲಾನುಭವಿಗಳಿಗೆ ತಲಾ 50 ಸಾವಿರ ಸ್ವಉದ್ಯೋಗಕ್ಕಾಗಿ ಸಹಾಯ ಧನ ವಿತರಿಸಲು ಅರ್ಜಿ ಕರೆಯಲಾಗಿದೆ. ಸಹಾಯಧನ ಪಡೆಯಲು ಮುನ್ನೂರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಲಾಟರಿ ಮೂಲಕ ಅಯ್ಕೆ ಮಾಡಲು ಕ್ರಮಕೈಗೊಳ್ಳುತ್ತೇನೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧ್ದಿ ಯೋಜನೆ ಜಿಲ್ಲಾ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಎಂ.ಬಿ. ನಾಗರಾಜ್ ಕಾಕನೂರು ಮಾತನಾಡಿ, ಧರ್ಮಸ್ಥಳ ಸಂಸ್ಥೆ ಆರ್ಥಿಕ, ಸಾಮಾಜಿಕ ಮತ್ತು ಧಾರ್ಮಿಕವಾಗಿ ಜನರಲ್ಲಿ ದುಡಿಮೆ ಎಂಬ ಜ್ಞಾನ ತುಂಬಿ ಕುಟುಂಬದ ನಿರ್ವಹಣಿಯಲ್ಲಿ ಮಹಿಳೆಯರನ್ನು ಮುಖ್ಯಸ್ಥರನ್ನಾಗಿಸುವಲ್ಲಿ ಯಶಸ್ವಿಯಾಗಿದೆ ಎಂದರು.

ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ, ಪ್ರಗತಿ ಬಂಧು ಸಂಘಗಳ ಅಧ್ಯಕ್ಷೆ ಹೇಮಾವತಿ, ಕಾರ್ಯದರ್ಶಿ ಎಂ.ಕೆ. ಕಬ್ಬೂರು, ಗ್ರಾಪಂ ಅಧ್ಯಕ್ಷ ಪುಟ್ಟಸ್ವಾಮಿ, ಯೋಜನಾಧಿಕಾರಿ ರವಿಚಂದ್ರ, ಮೇಲ್ವಿಚಾರಕಿ ಸಾಜನ್, ಮುಖಂಡ ಷಣ್ಮುಖಪ್ಪ, ರತ್ಮಮ್ಮ, ಅಣ್ಣಪ್ಪ, ಮಂಜುಳಾ, ವೀಣಾ ಇದ್ದರು.