ಹಗರೆ: ಪಡುವಳಲು ಗ್ರಾಮದಲ್ಲಿ ನಿರ್ಮಿಸಲಾಗಿರುವ ಬಸವೇಶ್ವರ ಮತ್ತು ಪರಿವಾರ ದೇವರುಗಳ ನೂತನ ವಿಗ್ರಹಗಳ ಮರು ಪ್ರತಿಷ್ಠಾಪನೆ ಹಾಗೂ ದೇವಾಲಯದ ಕಳಸಾರೋಹಣ ಸಮಾರಂಭ ಫೆ.15ರಿಂದ 17ರವರೆಗೆ ನಡೆಯಲಿದೆ.
ಫೆ.15ರ ಮುಂಜಾನೆ ಬಸವೇಶ್ವರ ಮತ್ತು ಪರಿವಾರದ ದೇವರ ನೂತನ ಮೂರ್ತಿಗಳನ್ನು ಯಗಚಿಹೊಳೆಯಲ್ಲಿ ಮಿಂದೆದ್ದಿಸಿದ ಬಳಿಕ ಗ್ರಾಮದ ರಾಜ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು. 16ರಂದು ನೂತನ ದೇವರುಗಳ ಪ್ರತಿಷ್ಠಾಪನೆ ನೆರವೇರಲಿದ್ದು, ಕುಂಭಾಬಿಷೇಕದ ನಂತರ ರುದ್ರಭಿಷೇಕ ನೆರವೇರಿಸಲಾಗುವುದು. ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಹಾಗೂ ಪುಷ್ಪಗಿರಿ ಮಠದ ಡಾ.ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಕಳಸಾರೋಹಣ ಮಾಡಲಿದ್ದಾರೆ.
17ರಂದು ಬೆಳಗ್ಗೆ 1008 ಪೂರ್ಣಕುಂಭ ನಡೆಯಲಿದೆ. ಬಾಳೆಹೊನ್ನೂರು ಮಠದ ಜಗದ್ಗುರು ಶ್ರೀ ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವದೊಂದಿಗೆ ಧಾರ್ಮಿಕ ಸಮಾರಂಭವೂ ನಡೆಯಲಿದೆ. 18ರಂದು ದೇವಾಲಯದ ಮುಂಭಾಗ ಕೊಂಡೋತ್ಸವ ನಡೆಯಲಿದೆ.
ನಾಲ್ಕು ದಿನ ನಿರಂತರ ದಾಸೋಹ, ಪ್ಲಾಸ್ಟಿಕ್ ಬಳಕೆ ನಿಷೇಧ: ದೇವಾಲಯ ಲೋಕಾರ್ಪಣೆ ಕಾರ್ಯಕ್ರಮ ನಾಲ್ಕು ದಿನ ನಡೆಯುವುದರಿಂದ ಎಲ್ಲರಿಗೂ ಉಪಾಹಾರ, ಊಟದ ವ್ಯವಸ್ಥೆ ಮಾಡಲಾಗಿದೆ. ದಾಸೋಹದಲ್ಲಿ ಪ್ಲಾಸ್ಟಿಕ್ ಲೋಟ, ಕಾಗದ ಮತ್ತು ಅಡಕೆ ತಟ್ಟೆ ಬಳಕೆಗೆ ನಿಷೇಧ ಹೇರಲಾಗಿದೆ. ಸ್ಟೀಲ್ ತಟ್ಟೆ, ಲೋಟ ಬಳಕೆ ಮಾಡಲು ನಿರ್ಧರಿಲಾಗಿದೆ.
ಮಠಾಧಿಪತಿಗಳು ಭಾಗಿ: ಬಾಳೆಹೊನ್ನೂರು ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಶ್ರೀಗಳ ಸಾನ್ನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಹರಗುರು ಚರಮೂರ್ತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಗ್ರಾಮದಲ್ಲಿ ನಾಲ್ಕು ಅಲಂಕಾರಿಕ ಚಪ್ಪರಗಳನ್ನು ನಿರ್ಮಿಸಲಾಗಿದೆ. ಕೇಸರಿ ಬಾವುಟ, ಬಟ್ಟಿಂಗ್‌ಗಳು ರಾರಾಜಿಸುತ್ತಿವೆ. ರಸ್ತೆ ಮಧ್ಯದಲ್ಲಿ ಮಹಿಳೆಯರು ಬಣ್ಣ ಬಣ್ಣದ ರಂಗೂಲಿ ಚಿತ್ರ ಬಿಡಿಸಿದ್ದಾರೆ.
ಹಲವು ವರ್ಷಗಳ ನಂತರ ನಮ್ಮ ಗ್ರಾಮದಲ್ಲಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯುತ್ತಿದೆ. ನಾಲ್ಕು ದಿನದಲ್ಲಿ ಹದಿನೈದು ಸಾವಿರಕ್ಕು ಹೆಚ್ಚು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ದೇವಾಲಯ ಲೋಕಾರ್ಪಣೆಗೆ ಸಿದ್ಧಗೊಂಡಿದೆ. ನಾಲು ್ಕದಿನ ನಿರಂತರ ದಾಸೋಹ ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ. ಈ ಪ್ರಯತ್ನಕ್ಕೆ ಎಲ್ಲರ ಸಹಕಾರ ಅಗತ್ಯ.
ದೇವುಕುಮಾರ್ ಖಜಾಂಚಿ, ಬಸವೇಶ್ವರ ದೇವಾಲಯ ಪ್ರತಿಷ್ಠಾಪನಾ ಸಮಿತಿ, ಪಡುವಳಲು