ಅಳವಂಡಿ ಸಮೀಪದ ಬೆಟಗೇರಿ ಗ್ರಾಮದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು. ಮರುಳಾರಾಧ್ಯ ಸ್ವಾಮೀಜಿ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಾಂತೇಶಗೌಡ ಪಾಟೀಲ್, ಪ್ರಮುಖರಾದ ಸುರೇಶ ಭೂಮರಡ್ಡಿ, ಈಶಪ್ಪ ಮಾದಿನೂರ, ಸಿದ್ದರಡ್ಡಿ, ಗುರುಬಸವರಾಜ ಹಳ್ಳಿಕೇರಿ ಇತರರಿದ್ದರು. 
ಜಿಲ್ಲೆ

ಧಾರ್ಮಿಕ ಕಾರ್ಯಗಳಿಂದ ಒಗ್ಗಟ್ಟು ಹೆಚ್ಚಳ

ಗಾಯತ್ರಿ ಮಾಲಿಪಾಟೀಲ್

ಅಳವಂಡಿ: ಹೇಮರಡ್ಡಿ ಮಲ್ಲಮ್ಮ ಭಕ್ತಿಯ ಶಕ್ತಿ ಆಗಿದ್ದಾಳೆ. ಸಂಸಾರದ ಸಾರವನ್ನು ಜಗತ್ತಿಗೆ ಸಾರಿದ ಆದರ್ಶ ಮಹಿಳೆಯಾಗಿದ್ದಾಳೆ ಎಂದು ಮರುಳಾರಾಧ್ಯ ಸ್ವಾಮೀಜಿ ಹೇಳಿದರು.

ಸಮೀಪದ ಬೆಟಗೇರಿ ಗ್ರಾಮದಲ್ಲಿ ರಡ್ಡಿ ಕ್ಷೇಮಾಭಿವೃದ್ಧಿ ಸಂಘ (ರಿ) ಹಾಗೂ ಗ್ರಾಮಸ್ಥರಿಂದ ಬುಧವಾರ ಹಮ್ಮಿಕೊಂಡಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೌಟುಂಬಿಕ ಸಮಸ್ಯೆಗಳನ್ನು ಮೆಟ್ಟಿ ನಿಂತು ಸಮಾಜಕ್ಕೆ ಹೆಣ್ಣಿನ ಮಹತ್ವ ಹಾಗೂ ದಾಸೋಹ ಪರಿಕಲ್ಪನೆ ಸಾರಿದ್ದಾರೆ. ಇಂಥಹ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಸಾಮೂಹಿಕವಾಗಿ ಆಚರಿಸುವುದರಿಂದ ಸಾರ್ವಜನಿಕರಲ್ಲಿ ಒಗ್ಗಟ್ಟಿನ ಭಾವನೆ ಮೂಡಲಿದೆ ಎಂದರು.

ಮೈನಳ್ಳಿ-ಬಿಕನಳ್ಳಿಯ ಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಹೇಮರಡ್ಡಿ ಮಲ್ಲಮ್ಮ ಕಾಯಕ ತತ್ವದಿಂದ ಪ್ರಸಿದ್ಧಿಯಾಗಿದ್ದಾರೆ. ಎಲ್ಲರೂ ಮಲ್ಲಮ್ಮ ತಾಯಿಯ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ನಾಡಿನ ಶರಣರ ವಾಣಿಗಳು ಮನುಕುಲದ ಏಳಿಗೆಯನ್ನು ಬಯಸುತ್ತವೆ ಎಂದರು. ಬೆಳಗ್ಗೆ ತಳಿರು ತೋರಣ ಹಾಗೂ ಹೂಗಳಿಂದ ಅಲಂಕರಿಸಿದ ವಾಹನದಲ್ಲಿ ನಂದಿಕೋಲು ಹಾಗೂ ವಿವಿಧ ಜನಪದ ವಾದ್ಯ ಮೇಳದೊಂದಿಗೆ ಶ್ರೀಶೈಲ ಮಲ್ಲಿಕಾರ್ಜುನ, ಹೇಮರಡ್ಡಿ ಮಲ್ಲಮ್ಮ ಹಾಗೂ ವೇಮನ ಭಾವಚಿತ್ರಗಳನ್ನು ಮೆರವಣಿಗೆ ಮಾಡಲಾಯಿತು.

ಪ್ರಮುಖರಾದ ರಮೇಶ ಜೋಳದ, ಬಸವರಾಜ ಹಾರೋಗೇರಿ, ವೀರೇಶ ಲಕ್ಷಾಣಿ, ನಾರಾಯಣಪ್ಪ, ಮಲ್ಲಪ್ಪ ಯತ್ನಳ್ಳಿ, ಯಂಕಣ್ಣ ಕೊರಣ್ಣವರ, ಶರಣಪ್ಪ ಮತ್ತೂರು, ಹನುಮರಡ್ಡಿ ಬೇಲಡಗಿ, ಮಲ್ಲಿಕಾರ್ಜುನ ಯತ್ನಳ್ಳಿ, ಬಸವರಾಜ ಯತ್ನಳ್ಳಿ, ಪ್ರಶಾಂತ್ ಮತ್ತೂರು, ಯಂಕಣ್ಣ ನಾಗರಡ್ಡಿ ಇತರರಿದ್ದರು.