ಬೈಂದೂರು: ಧರ್ಮವೆಂಬುವುದು ಬದುಕಿನ ನಡೆಯಾಗಿದ್ದು, ಇದರ ಹಿಂದೆ ದೈವ, ದೇವರುಗಳು ಇರುವುದರಿಂದ ಧರ್ಮ ಗಟ್ಟಿಯಾಗಿ ನಿಂತಿದೆ. ಆಚಾರ, ನಡೆ, ನುಡಿಗಳು ಧರ್ಮವಾದರೆ ಭಗವಂತ ಇದರ ಧರ್ಮಾಧಿಕಾರಿ ಎಂದು ಸುಬ್ರಹ್ಮಣ್ಯ ಮಠದ ಪೀಠಾಧಿಪತಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಬೈಂದೂರಿನ ಚಿತ್ತೇರಿ ಶ್ರೀ ಬ್ರಹ್ಮಲಿಂಗೇಶ್ವರ ಮತ್ತು ಸಪರಿವಾರ ದೇವರ ಹಾಗೂ ದೈವಗಳ ನೂತನ ದೇಗುಲಗಳ ಲೋಕಾರ್ಪಣೆ ಹಾಗೂ ಪುನಃ ಪ್ರತಿಷ್ಠಾಪನಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ನಾವು ಯಾರಿಗೂ ತಿಳಿಯದ ಹಾಗೆ ಅನ್ಯಾಯ, ಅಪಚಾರ ಮಾಡಬಹುದಾದರೂ ದೈವ, ದೇವರುಗಳು ನಮ್ಮನ್ನು ನೋಡುತ್ತಿರುತ್ತಾರೆ. ಅವನ ಕಣ್ಣು ತಪ್ಪಿಸಲಾಗದು ಎಂಬ ಪ್ರಜ್ಞೆ ನಮ್ಮಲ್ಲಿರಬೇಕು. ಹಾಗಾಗಿ ಧರ್ಮದ ಹಿಂದೆ ದೈವ, ದೇವರುಗಳು ಸಾಕ್ಷಿಯಾಗಿರುವುದರಿಂದ ಇಂದಿಗೂ ಧರ್ಮ ಉಳಿದಿದೆ ಎಂದರು.
ಚಿತ್ತೇರಿ ಜೀರ್ಣೋದ್ಧಾರ ಸಮಿತಿ ಮಾಜಿ ಅಧ್ಯಕ್ಷ ಜಗನ್ನಾಥ ಶೆಟ್ಟಿ ನಾಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಕೊರಂಗ್ರಪಾಡಿ ಕೆ.ಪಿ. ಕುಮಾರಗುರು ತಂತ್ರಿ ಧಾರ್ಮಿಕ ಪ್ರವಚನ ನೀಡಿದರು. ದೇವಳದ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ ದಾನಿಗಳನ್ನು ಸುಬ್ರಹ್ಮಣ್ಯ ಶ್ರೀಗಳು ಗೌರವಿಸಿದರು.
ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ತಗ್ಗರ್ಸೆ, ಶ್ರೀ ಕ್ಷೇತ್ರ ಚೋನುಮನೆ ಆಡಳಿತ ಧರ್ಮದರ್ಶಿ ಡಾ. ಅಶೋಕಕುಮಾರ್ ಶೆಟ್ಟಿ, ಉದ್ಯಮಿಗಳಾದ ಪಿ.ಸುಖಾನಂದ ಶೆಟ್ಟಿ, ದೊಡ್ಮನೆ ರಘುರಾಮ ಶೆಟ್ಟಿ, ಸೂಲಿಯಣ್ಣ ಶೆಟ್ಟಿ, ಶಿಲ್ಪಿ ಗಣೇಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ, ಮಾಜಿ ಸದಸ್ಯ ಸುರೇಶ ಬಟ್ವಾಡಿ, ತಾಪಂ ಮಾಜಿ ಸದಸ್ಯ ಸದಾಶಿವ ಪಡುವರಿ, ಕೃಷ್ಣಪ್ಪ ಶೆಟ್ಟಿ ಕೋಣೆಮನೆ, ರಾಜೀವ ಶೆಟ್ಟಿ ಮುರ್ಡೇಶ್ವರ ಇದ್ದರು. ಶಿವರಾಮ ಶೆಟ್ಟಿ ಸ್ವಾಗತಿಸಿದರು. ಸದಾಶಿವ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ವಿವಿಧ ಧಾರ್ಮಿಕ ಕಾರ್ಯ
ದೇವಸ್ಥಾನದಲ್ಲಿ ಬೆಳಗ್ಗೆ ಬ್ರಹ್ಮ ದೇವರ ಹಾಗೂ ನಾಗದೇವರ ನುಡಿ ದರ್ಶನ, ಶಾಂತಿ ಪ್ರಾಯಶ್ಚಿತ ಹೋಮ, ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಗಣಪತಿ ದೇವರಿಗೆ ರಂಗಪೂಜೆ, ಹಾಗೂ ಎಲ್ಲ ದೇವರಿಗೆ ದೀಪೋತ್ಸವ, ದೈವಗಳ ನುಡಿ ದರ್ಶನ ಜರುಗಿತು. ರಾತ್ರಿ ಸಾಲಿಗ್ರಾಮ ಮೇಳದವರಿಂದ ಪೌರಾಣಿಕ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.