ಜಿಲ್ಲೆ

ಸ್ವ ಅಭಿವೃದ್ಧಿ ಜತೆಗೆ ಪರರ ಏಳಿಗೆಯೇ ಧರ್ಮ

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ

ಇನ್ನೊಬ್ಬರಿಗೆ ತೊಂದರೆ ನೀಡದೆ ಬದುಕುವುದೇ ಧರ್ಮ. ತಾನು ಅಭಿವೃದ್ಧಿಯಾಗುವುದರ ಜತೆಗೆ ಬೇರೆಯವರನ್ನೂ ಅಭಿವೃದ್ಧಿಗೊಳಿಸುವುದು ಪರಮ ಧರ್ಮ ಎಂದು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ಶ್ರೀಗಳು ಹೇಳಿದರು.

ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶನಿವಾರ ಅಷ್ಟಪವಿತ್ರ ನಾಗಮಂಡಲೋತ್ಸವ ಸಭೆಯಲ್ಲಿ ಆಶೀರ್ವಚನ ನೀಡಿ, ಧರ್ಮದ ನಂಬಿಕೆ ಔಕಟ್ಟಿನಲ್ಲಿ ಸಮಾಜ ಸುಸ್ಥಿತಿಯಲ್ಲಿರುತ್ತದೆ. ಆಸ್ತಿಕತೆ, ಧಾರ್ಮಿಕ ಪ್ರಜ್ಞೆ ಇಲ್ಲದ ಸಮಾಜ ಅಪಾಯಕಾರಿ. ನಾಗನ ಆರಾಧನೆಯಿಂದ ಸಂತತಿ, ಸಂಪತ್ತು, ಆರೋಗ್ಯ ಎಂದೆಂದಿಗೂ ಸಾಧ್ಯ ಎಂದು ಹೇಳೀದರು.

ಕಟೀಲು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಬಾಲಕೃಷ್ಣ ಶೆಟ್ಟಿ ಧಾರ್ಮಿಕ ಉಪನ್ಯಾಸ ನೀಡಿದರು. ಮಂದಾರ್ತಿ ಶ್ರೀ ಆದಿ ಸುಬ್ರಹ್ಮಣ್ಯ ದೇವರ ಶಿಲಾಮಯ ದೇವಸ್ಥಾನವನ್ನು ನಿರ್ಮಿಸಿ ಪುನಃ ಪ್ರತಿಷ್ಠೆಯೊಂದಿಗೆ ಲೋಕಾರ್ಪಣೆಗೊಳಿಸಿದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರನ್ನು ಸನ್ಮಾನಿಸಲಾಯಿತು.

ದೇವಳದ ಅಧ್ಯಕ್ಷ ಎಚ್.ಧನಂಜಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಕಿರಣ್ ಕುಮಾರ್ ಕೊಡ್ಗಿ, ಹೆಗ್ಗುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಕೃಷ್ಣ, ಕಾರ್ಯನಿರ್ವಹಣಾಧಿಕಾರಿ ಪಿ.ಜಯಮ್ಮಾ ಮತ್ತಿತರರು ಉಪಸ್ಥಿತರಿದ್ದರು. ಪ್ರಮೋದ್ ಶೆಟ್ಟಿ ಹೆಗ್ಗುಂಜೆ ಸ್ವಾಗತಿಸಿದರು. ಪ್ರದೀಪ್ ಶೆಟ್ಟಿ, ಪ್ರವೀಣ್ ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು. ಕೆ.ಸಿ.ರಾಜೇಶ್ ನಿರೂಪಿಸಿದರು.

40 ಸಹಸ್ರ ಮಂದಿ ಅನ್ನಪ್ರಸಾದ ಸ್ವೀಕಾರ

ಕ್ಷೇತ್ರದಲ್ಲಿ ಗಣಹೋಮ, ನವಗ್ರಹ ಹೋಮ, ಅನಂತರ ಮಹಾಮಂಗಳಾರತಿ, ನಾಗದರ್ಶನ, ಪಲ್ಲಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿದವು. ಮಧ್ಯಾಹ್ನ 40,000ಕ್ಕೂ ಅಧಿಕ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಮಂದರತಿ, ನೀಲರತಿ, ಚಾರುರತಿ, ದೇವರತಿ, ನಾಗರತಿ ಎಂಬ ಐದು ವಿಭಾಗಗಳಲ್ಲಿ ಅನ್ನಪ್ರಸಾದ ವಿತರಿಸಲಾಯಿತು. ಸಹಸ್ರಾರು ಭಕ್ತರು ಕ್ಷೇತ್ರದ ವ್ಯವಸ್ಥೆಗಳ ಕುರಿತು ಶ್ಲಾಘಿಸಿದರು. ವಿವಿಧ ಸಂಘ ಸಂಸ್ಥೆಗಳ ನೂರಾರು ಸ್ವಯಂ ಸೇವಕರು ಸಹಕರಿಸಿದರು.