ಜಿಲ್ಲೆ

ಕಿಡಿಗೇಡಿಗಳ ಕುಕೃತ್ಯಕ್ಕೆ ಧರ್ಮ ಲೇಪನ ಸಲ್ಲ

ಹುಬ್ಬಳ್ಳಿ: ಗೌರಿ-ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಒಟ್ಟಾಗಿಯೇ ಆಗಮಿಸಿವೆ. ಇದು ನಮಗೆಲ್ಲ ಸಂತೋಷ ತಂದಿದೆ. ಕೆಲ ಕಿಡಿಗೇಡಿಗಳು ಮಾಡುವ ಕುಕೃತ್ಯಕ್ಕೆ ಧರ್ಮದ ಬಣ್ಣ ಲೇಪನ ಮಾಡಬಾರದು. ಶಾಂತಿಯುತವಾಗಿ ಹಬ್ಬ ಆಚರಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ತಿಳಿಸಿದರು.
ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ನಿಮಿತ್ತ ಹು-ಧಾ ಪೊಲೀಸ್ ಆಯುಕ್ತಾಲಯ ವತಿಯಿಂದ ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸೌಹರ್ದ ಸಭೆಯಲ್ಲಿ ಅವರು ಮಾತನಾಡಿದರು.
ಶ್ರಮಿಕರು ವಾಸವಾಗಿರುವ ಹುಬ್ಬಳ್ಳಿ-ಧಾರವಾಡ ನಗರದಲ್ಲಿ ದುಡಿದು ತಿನ್ನುವವರ ಸಂಖ್ಯೆಯೇ ಹೆಚ್ಚು. ಅವರಿಗೆ ಯಾವ ಧರ್ಮವೂ ಇಲ್ಲ. ಕಾಯಕವೇ ಅವರ ಧರ್ಮ. ಆದರೂ ಬಹಳಷ್ಟು ಪ್ರದೇಶಗಳು ಹಿಂದುಳಿದಿವೆ. ಅಲ್ಲಿಯ ಮಕ್ಕಳಿಗೆ ಶಿಕ್ಷಣದ ಕೊರತೆಯಿದೆ. ಆಯಾ ಸಮುದಾಯದ ಮುಖಂಡರು, ಧರ್ಮಗುರುಗಳು ಅವಿದ್ಯಾವಂತರಿಗೆ ಶಿಕ್ಷಣ ಕೊಡಿಸಬೇಕು. ಜನರು ಸಂಪೂರ್ಣವಾಗಿ ಸುಶಿಕ್ಷಿತರಾದಾಗ ಮಾತ್ರ ಕೋಮು ಸೌಹಾರ್ದತೆ, ಸಾಮರಸ್ಯ ಮೂಡಲು ಸಾಧ್ಯ ಎಂದರು.
ಡಿಜೆ ಬಳಸಿ ಕುಣಿದು ಕುಪ್ಪಳಿಸಿ ಹಬ್ಬ ಆಚರಿಸುವುದು ನಮ್ಮ ಸಂಪ್ರದಾಯವಲ್ಲ. ಸುಪ್ರಿಂಕೋರ್ಟ್ ನಿಯಮದ ಪ್ರಕಾರ ಗಣೇಶ ವಿಸರ್ಜನೆಯ ದಿನ ರಾತ್ರಿ 10 ಗಂಟೆಗೆ ಎಲ್ಲ ಡಿಜೆಗಳು ಬಂದ್‌ಆಗಬೇಕು. ಸಾರ್ವಜನಿಕರು ಮನೆಯ ಮಂದಿಯನ್ನು ಕರೆತಂದು ಗಣೇಶ ಉತ್ಸವ ನೋಡಿ ದೇವರ ಆಶೀರ್ವಾದ ಪಡೆಯುವುದೇ ನಿಜವಾದ ಗಣೇಶೋತ್ಸವ ಎಂದರು.
ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ನಾವೆಲ್ಲರೂ ಕೂಡಿದ್ದರೆ ಭಾವೈಕ್ಯತೆಯ ಬೇರು ಭದ್ರವಾಗಿರುತ್ತದೆ. ನಗರಕ್ಕೆ ದಕ್ಷ ಅಧಿಕಾರಿಗಳ ಸೇವೆ ಅಗತ್ಯ. ಸಾರ್ವಜನಿಕರು ತಮ್ಮ ಜವಾಬ್ದಾರಿ ಅರಿತು ಬಾಳಬೇಕು. ಎಲ್ಲವೂ ಪೊಲೀಸರಿಂದ ಮಾತ್ರ ಸಾಧ್ಯವಿಲ್ಲ. ಸಾರ್ವಜನಿಕರು ಸಹಕಾರ ನೀಡಿದರೆ ಮಾತ್ರ ಸುಧಾರಿತ ನಗರ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಶಾಂತಿ-ಸುವ್ಯವಸ್ಥೆ ಕಾಪಾಡಿಕೊಂಡು ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಆಚರಿಸೋಣ ಎಂದರು.
ಅಂಜುಮನ್ ಸಂಸ್ಥೆ ಅಧ್ಯಕ್ಷ ಎ.ಎಂ. ಹಿಂಡಸಗೇರಿ ಮಾತನಾಡಿ, ದೇಶದ ಪರಂಪರೆಯ ಪ್ರಕಾರ ಸಾವಿರಾರು ವರ್ಷಗಳಿಂದ ಹಬ್ಬ ಆಚರಿಸುತ್ತ ಬಂದಿದ್ದೇವೆ. ಹಬ್ಬ ಆಚರಿಸುವ ಉದ್ದೇಶ ಸಂತೋಷ, ಪ್ರೀತಿ ಹಂಚಿಕೊಳ್ಳುವುದು. ಪ್ರೀತಿ, ವಿಶ್ವಾಸದಿಂದ ನಗರಕ್ಕೆ ಒಳ್ಳೆಯ ಹೆಸರು ತರಬೇಕು. ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಒಂದೇ ದಿನ ಬಂದರೂ ಹಿಂದೆ-ಮುಂದೆ ಮಾಡಿ ಆಚರಿಸೋಣ. ಕಳೆದ ಬಾರಿಯಂತೆ ಒಂದೆರಡು ದಿನ ತಡೆದು ಈದ್ ಮಿಲಾದ್ ಮೆರವಣಿಗೆ ಮಾಡೋಣ ಎಂದರು.
ಕ್ರಿಶ್ಚಿಯನ್ ಧರ್ಮಗುರು ಫಾದರ್ ಆಲ್ವಿನ್ ಸುಧೀರ್ ಮಾತನಾಡಿ, ಎಲ್ಲ ಧರ್ಮದವರೂ ನನ್ನ ಸಹೋದರರು. ಪ್ರೀತಿಯಿಂದ ಬಾಳುತ್ತೇನೆ ಎಂದು ಸಂಕಲ್ಪ ಮಾಡಬೇಕು. ಕೋಮು ಸೌಹಾರ್ದತೆಗಿಂತ ಸಂಘರ್ಷ ಹೆಚ್ಚಾಗುತ್ತಿದೆ. ಸಮಾಜದ ಪ್ರಮುಖರು ಹಾಗೂ ಗುರುಗಳು ಶಾಂತಿಸಭೆ ಮಾಡಿದರೆ ಕೋಮು ದಳ್ಳುರಿ ಇರುವುದಿಲ್ಲ ಎಂದರು.
ಮುಸ್ಲಿಂ ಧರ್ಮಗುರು ತಾಜುದ್ದೀನ್ ಪೀರ್ ಖಾದ್ರಿ ಮಾತನಾಡಿ, ಧರ್ಮ ಗುರುಗಳು ಒಂದೆಡೆ ಸೇರುತ್ತಾರೆ. ಆದರೆ, ಸಾರ್ವಜನಿಕರು ಏಕೆ ಸೇರುವುದಿಲ್ಲ? ಕೆಲವರ ವೈಯಕ್ತಿಕ ಹಿತಾಸಕ್ತಿಗಳಿಂದ ಸಮಾಜದಲ್ಲಿ ಕೋಮು ಸಂಘರ್ಷಗಳು ನಡೆಯುತ್ತಿವೆ. ನಾವು ಅದಕ್ಕೆ ಆಸ್ಪದ ನೀಡದೇ ಶಾಂತಿಯುತವಾಗಿ ಹಬ್ಬ ಆಚರಿಸೋಣ ಎಂದು ವಿನಂತಿಸಿದರು.
ಸಿಖ್ ಧರ್ಮಗುರು ಗ್ಯಾನಿ ಸುರೇಂದ್ರ ಸಿಂಗ್, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಉಪಾಧ್ಯಕ್ಷರಾದ ಶಾಂತರಾಜ ಪೋಳ, ಅಲ್ತಾಫ್ ಕಿತ್ತೂರು, ಗುರುನಾಥ ಉಳ್ಳಿಕಾಶಿ, ಡಿ. ಗೋವಿಂದರಾವ್ ಇತರರು ಮಾತನಾಡಿದರು.
ಮಾಜಿ ಶಾಸಕ ಅಶೋಕ ಕಾಟವೆ, ಮಹೇಂದ್ರ ಸಿಂಘಿ, ಡಿಸಿಪಿಗಳಾದ ಮಹಾನಿಂಗ ನಂದಗಾವಿ, ಸಿ.ಆರ್. ರವೀಶ, ಎಸಿಪಿ ಶಿವಪ್ರಕಾಶ ನಾಯಕ್ ಇತರರು ಹಾಜರಿದ್ದರು.

  • ವಿಸರ್ಜನೆಗೆ ಕ್ರೇನ್ ಬಳಕೆ: ಬೆಳಗಾವಿ-ಮಹಾರಾಷ್ಟ ಮಾದರಿಯಲ್ಲಿ ಗಣೇಶ ವಿಸರ್ಜನೆ ವೇಳೆ ಕ್ರೇನ್ ಬಳಸುವ ಕುರಿತು ಯೋಜನೆ ರೂಪಿಸಲಾಗಿದೆ. ಹು-ಧಾ ನಗರದ ಆರು ಕಡೆ ಗಣೇಶ ವಿಸರ್ಜನೆಗೆ ಸ್ಥಳ ಗುರುತಿಸಿದ್ದೇವೆ. ಕೆಲ ಬಡಾವಣೆಗಳಲ್ಲಿ ಹೆಚ್ಚುವರಿ ಬಾವಿ ನಿರ್ಮಿಸುವಂತೆ ಒತ್ತಾಯ ಕೇಳಿ ಬರುತ್ತಿದೆ. ಎಲ್ಲೆಲ್ಲಿ ಎಷ್ಟೆಷ್ಟು ಬಾವಿ ನಿರ್ಮಿಸಬೇಕೆಂಬುದನ್ನು ಚರ್ಚಿಸುತ್ತಿದ್ದೇವೆ. ಒಂಬತ್ತು ಮೊಬೈಲ್ ಬಾವಿ ಸಿದ್ಧವಿದೆ ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದರು.
  • ಸಾರ್ವಜನಿಕ ಗಣೇಶ ಮಂಡಳಿಗಳಿಂದ ಈವರೆಗೂ ಹತ್ತು ಅರ್ಜಿ ಪಡೆದಿದ್ದೇವೆ. ಯಾವುದೇ ಸಂದರ್ಭದಲ್ಲೂ ಸಿಂಗಲ್ ವಿಂಡೋ ಸಿಸ್ಟಂ ಪ್ರಕಾರ ಅನುಮತಿ ನೀಡಲಾಗುತ್ತಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಗಣೇಶೋತ್ಸವ ಪೆಂಡಾಲ್‌ಗಳಲ್ಲಿ ಗುಟ್ಕಾ ಪ್ರಚಾರಾರ್ಥ ಬ್ಯಾನರ್, ಹೋಲ್ಡಿಂಗ್ಸ್ ಅಳವಡಿಸಿರುವ ಬಗ್ಗೆ ಸಾಕಷ್ಟು ದೂರು ಬಂದಿದ್ದು, ತೆರವುಗೊಳಿಸಲಾಗುವುದು ಎಂದರು.